ಪ್ರಧಾನಿ ಹುದ್ದೆಗೆ ಕೆಪಿ ಓಲಿ ರಾಜೀನಾಮೆ
ಕಠ್ಮಂಡು : ನೇಪಾಳದಲ್ಲಿ ಸರಕಾರದ ವಿರುದ್ಧ ಯುವ ಸಮುದಾಯ ರೊಚ್ಚಿಗೆದ್ದು, ಸಂಘರ್ಷ ತಾರಕಕ್ಕೇರಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಪ್ರಧಾನಿ ಕೆಪಿ ಶರ್ಮಾ ಒಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಒಲಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ನಿಷೇಧಿಸುವ ಆದೇಶ ಹೊರಡಿಸಿದ್ದರು. ಸರಕಾರದ ಈ ನಿರ್ಧಾರದ ವಿರುದ್ಧ ನೇಪಾಳದಾದ್ಯಂತ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು ರಾಜಧಾನಿ ಕಠ್ಮಂಡು ಹೊತ್ತಿ ಉರಿಯುವಂತಾಗಿದೆ.
ರಾಜಕೀಯ ಅಸ್ಥಿರತೆ, ಸರಕಾರದ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ಹೊಂದಿದ್ದ ಜನತೆ ಸಾಮಾಜಿಕ ಜಾಲತಾಣ ನಿಷೇಧದಿಂದ ಸಿಡಿದೆದಿದ್ದಾರೆ. ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಪ್ರಧಾನಿ ಕಳ್ಳ, ದೇಶ ಬಿಟ್ಟು ತೊಲಗಲಿ, ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ ಎಂಬ ಘೋಷಣೆ ಕೂಗಿದರು.
ನೇಪಾಳದ ರಾಜಕೀಯ ನಾಯಕರ ಮನೆ-ಕಚೇರಿಗಳ ಮೇಲೆ ದಾಳಿ ಮಾಡಿರುವ ಪ್ರತಿಭಟನಾಕಾರರು ಮನೆಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪ್ರತಿಭಟನಾಕಾರರಿಗೆ ಮಣಿದಿರುವ ಹಲವು ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರತಿಭಟನಾಕಾರರು ಬೀದಿಗಿಳಿದಿದ್ದು ಸರಕಾರ ಅಕ್ಷರಶಃ ಕಂಗಾಲಾಗಿದೆ. ಸಂಘರ್ಷದಿಂದ ಈಗಾಗಲೇ 20 ಮಂದಿ ಬಲಿಯಾಗಿದ್ದಾರೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರತಿಭಟನೆಗೆ ಪುಷ್ಟಿ ನೀಡಿದ್ದು 36 ವರ್ಷದ ಯುವಕನ ಕರೆ. ಆತ ನೀಡಿದ ಪ್ರತಿಭಟನೆಯ ಕರೆಗೆ ಓಗೊಟ್ಟ ನೇಪಾಳದ ಕೋಟ್ಯಾಂತರ ಯುವಕರು, ತಮ್ಮ ಶಾಲಾ ಕಾಲೇಜುಗಳನ್ನು ತೊರೆದು, ತಮ್ಮ ಉದ್ಯೋಗ, ಮನೆ-ಮಠಗಳನ್ನು ಬಿಟ್ಟು ಬಂದು ಹೋರಾಟದಲ್ಲಿ ಭಾಗವಹಿಸಿದ್ದರು.











