ರಕ್ಷಾ ಬಂಧನದ ವಿಶೇಷತೆ – ಏಕೆ ಈ ಆಚರಣೆ ?

ರಕ್ಷಾ ಬಂಧನ ಹೆಸರೇ ಸೂಚಿಸುವಂತೆ ಸಾಮಾನ್ಯವಾಗಿ ರಕ್ಷಣೆ ಎಂದರೆ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ದುಷ್ಟ ಶಕ್ತಿಯಿಂದ ಅಥವಾ ಕೆಟ್ಟ ವ್ಯಕ್ತಿಯಿಂದ ರಕ್ಷಿಸುವುದು ಅಥವಾ ವ್ಯಕ್ತಿಯು ಸ್ವಯಂ ರಕ್ಷಣೆ ಮಾಡಿಕೊಳ್ಳುವುದು. ಹಾಗೆಯೇ ಬಂಧನ ಎಂದರೆ ವ್ಯಕ್ತಿಯು ರಕ್ಷಣೆಗೆ ಮೂಲವಾದ ವಸ್ತುವನ್ನು ಅಥವಾ ಇನ್ನೊಬ್ಬ ವ್ಯಕ್ತಿಯನ್ನ ಆತನ ರಕ್ಷಾಜಾಲ ಅಥವಾ ಗೂಡಿನಲ್ಲಿ ಅಡಗಿಸಿಟ್ಟುಕೊಳ್ಳುವುದು ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಹೇಳುವುದಾದರೆ ನಾವು ವಿವಿಧ ರೀತಿಯ ರಕ್ಷಾಬಂಧನಗಳನ್ನು ಕಾಣಬಹುದು.ಉದಾಹರಣೆಗೆ : “ತಂದೆ ತಾಯಿ ಮಗುವಿಗೆ ಮಾಡುವ ಪಾಲನೆ ಪೋಷಣೆ ಪ್ರೀತಿ” ಮತ್ತು ಗಡಿಯಲ್ಲಿ ನಮಗಾಗಿ ಶ್ರಮಿಸುತ್ತಿರುವ ಯೋಧ ಕುಟುಂಬಗಳು ಇವೆಲ್ಲವೂ ರಕ್ಷಾಬಂಧನದ ಒಂದು ರೀತಿಯ ಸಣ್ಣ ಮಾದರಿಗಳೇ ಆಗಿದೆ. ಆದರೆ ಇವು ನಾವು ಪ್ರಸ್ತುತವಾಗಿ ಸಂಭ್ರಮಿಸುತ್ತಿರುವ ರಕ್ಷಾಬಂಧನದ ಆಚರಣೆಗಳಾಗಿಲ್ಲ. ಈಗಿನ ಪರಿಸರ ಅಥವಾ ಪರಿಸ್ಥಿತಿಯು ಅಣ್ಣ ತಂಗಿಯ ಅವಿನಾಭಾವ ಸಂಬಂಧವನ್ನು ರಕ್ಷಾಬಂಧನ ಎಂದು ಸಮಾಜದ ತುಂಬಾ ನಂಬಿಸಿಟ್ಟಿದೆ, ಜೊತೆಗೆ ಒಪ್ಪಿಕೊಂಡಿದೆ, ಆಚರಣೆಯು ಸಹ ನಡೆಯುತ್ತಿದೆ.

ರಕ್ಷಾ ಬಂಧನದ ವಿಶೇಷತೆ
ಸಂಪ್ರದಾಯದಂತೆ ಒಬ್ಬಳು ಸಹೋದರಿಯರು ತನ್ನ ಸಹೋದರನಿಗೆ ರಕ್ಷೆಯ ದಾರ ಅಥವಾ ಆಡು ಭಾಷೆಯಿಂದ ರೂಪಿತವಾದ ರಾಖಿಯನ್ನು ಕಟ್ಟುವುದು ಕರ್ನಾಟಕದಲ್ಲಿನ ವಿಶೇಷ ಕಲ್ಪನೆಯಾಗಿದೆ. ಈ ರಕ್ಷಾಬಂಧನದಲ್ಲಿ ಯಾವುದೇ ಭೇದ ಭಾವ, ಮತ್ತು ಸಂಕೋಚ, ಹಾಗೂ ನಿರ್ಭಯದಿಂದ ಒಂದು ಹೆಣ್ಣು ಅಪರಿಚಿತ ಪುರುಷರಿಗೂ ಸೇರಿ ಸ್ವಚ್ಛ ಮನಸ್ಸಿನಿಂದ ಸಹೋದರ ಎಂಬ ಭಾವನೆಯಲ್ಲಿ ರಾಖಿಯನ್ನ ಕಟ್ಟುತ್ತಾರೆ, ಮತ್ತು ಕಟ್ಟಿದ ತದನಂತರವೇ ರಾಖಿ ಕಟ್ಟಿಸಿಕೊಂಡಂತಹ ವ್ಯಕ್ತಿ ಆಕೆಯನ್ನು ಒಬ್ಬ ತಾಯಿ ಸಮಾನಳಾಗಿ ಮತ್ತು ರಕ್ತ ಸಂಬಂಧಿಯಾಗಿ ಭಾವಿಸಿ, ಆಕೆಯ ಎಲ್ಲಾ ನಕಾರಾತ್ಮಕ ತೊಂದರೆಗಳ ವಿರುದ್ಧ ಹೋರಾಡಿ ರಕ್ಷಿಸುವುದರೊಂದಿಗೆ, ಸಕಾರಾತ್ಮಕ ವಿಷಯಗಳಲ್ಲಿ ಪಾಲ್ಗೊಂಡು ನಿಷ್ಕಲ್ಮಶ ಬಾಂಧವ್ಯದ ತೃಪ್ತಿಯನ್ನು ಅನುಭವಿಸಬೇಕಾಗುತ್ತದೆ. ಮತ್ತು ಈ ದಿನದಂದು ಸಹೋದರನಾದಂತವನು ತನ್ನ ಸಹೋದರಿಯರು ಬಯಸಿದ ಯಾವುದೇ ವಸ್ತುಗಳನಾಗಲಿ ಉಡುಗೊರೆಗಳನ್ನಾಗಿ ಸಮರ್ಪಿಸಬೇಕೆಂಬ ನಿಲುವುಗಳು ಸಹ ಇದೆ. ಒಮ್ಮೊಮ್ಮೆ ಸಾಧ್ಯವಾಗದೇ ಇದ್ದಲ್ಲಿ ಸಣ್ಣ ಉಡುಗೊರೆಯಾಗಿ ಆಕೆಗೆ ಹಣವನ್ನು ಸಹ ನೀಡಲಾಗುತ್ತದೆ. ಈ ಋತು ಕಾರ್ಯ ಅಥವಾ ಸಂಭ್ರಮಾಚರಣೆಯು ವರ್ಷದಿಂದ ವರ್ಷಕ್ಕೆ ಹೀಗೆ ಸಾಗುತ್ತಲೇ ಹೋಗುತ್ತದೆ.

ಏಕೆ ಈ ಆಚರಣೆ?
ರಕ್ಷಾ ಬಂಧನ ಎಂಬುದು ಎಂತಹ ದುಷ್ಟ ಮನಸ್ಸಿನವರನ್ನು ಸಹ ಬದಲಾಯಿಸುವಂತಹ ಒಂದು ಅಸ್ತ್ರ ಅಥವಾ ಆಚರಣೆ, ರಾಮಾಯಣವನ್ನೆಲ್ಲಾ ಸ್ವಲ್ಪ ನೋಡಿದರೆ ರಾವಣ ಒಬ್ಬ ವೀರ, ಶೂರ, ಆಜಾನುಬಾಹು, ಇದರೊಟ್ಟಿಗೆ ವಿಶೇಷವಾಗಿ ಅರಿವಾಗುವುದು ಅವನೊಬ್ಬ ದುಷ್ಟ ಎಂದು. ಅವನು ತನ್ನ ದುರಾಸೆಯಿಂದ ಸೀತೆಯನ್ನೇ ಅಪಹರಿಸಿ ಇಟ್ಟಿದ್ದ, ಜೊತೆಗೆ ಅನೇಕ ಮಹಿಳೆಯರನ್ನ ತನ್ನಡೆಗೆ ಆಕರ್ಷಿಸುವಂತೆ ಮಾಡಿದ್ದಾನೆ, ಇಂತಹ ದುಷ್ಟ ಅಥವಾ ಘೋರ ಮನಸ್ಸುಳ್ಳವನಿಗೆ ಶೂರ್ಪನಕಿ ಎಂಬ ರಕ್ತ ಸಂಬಂಧಿ ಸಹೋದರಿ ಇದ್ದಳು. ಹೇಳುವುದಾದರೆ ಈಕೆಯೂ ಒಬ್ಬ ಮಹಿಳೆ, ದುಷ್ಟ ಮನಸ್ಸಿನವರು ಯಾರನ್ನೂ ತನ್ನವರೆಂದು ಭಾವಿಸುವುದು ಕೆಲವೊಮ್ಮೆ ಅಸಾಧ್ಯ. ಆದರೆ ರಾವಣ ಯಾವತ್ತಿಗೂ ತನ್ನ ಸಹೋದರಿಯನ್ನ ವಕ್ರದೃಷ್ಟಿಯಿಂದ ಕಾಣಲೇ ಇಲ್ಲ. ಇದು ಈ ರಕ್ಷಾ ಬಂಧನ ಅಥವಾ ಬಂಧದ ಒಂದು ಮೌಲ್ಯಯುತ ಉದಾಹರಣೆಯಾಗಿದೆ. ಜೊತೆಗೆ ಪುರುಷರು ರಾವಣನಂತೆ ತನ್ನ ಸಹೋದರಿ ಯಾರೊಂದಿಗೆ ಬೇರೆ ಮಹಿಳೆಯರನ್ನು ಸಹ ಹಿತದೃಷ್ಟಿಯಲ್ಲಿ ಕಾಣುವಂತೆ ಮಾಡುವ ಒಂದು ಪ್ರಯೋಜನಕಾರಿ ಸಂಭ್ರಮಾಚರಣೆಯಾಗಿದೆ.

ಕೆಲವು ರಾಜ್ಯಗಳ ಆಚರಣೆಯ ಪದ್ಧತಿಗಳು
ರಾಜಸ್ಥಾನದಲ್ಲಿ ಅಲ್ಲಿಯ ಮಾರ್ವಾಡಿ ಸಮುದಾಯದಲ್ಲಿ ರಕ್ಷಾಬಂಧನಕ್ಕೆ “ಲಂಬಾ ರಾಖಿ” ಎಂಬ ವಿಶೇಷ ಹೆಸರಿದ್ದು, ಅಲ್ಲಿ ಸಹೋದರಿಯರು ತಮ್ಮ ಸಹೋದರನ ಹೆಂಡತಿಗೆ “ಲುಂಬ ರಾಖಿ”ಯನ್ನು ಕಟ್ಟಲಾಗುತ್ತದೆ. ಜೊತೆಗೆ ತನ್ನ ಅತ್ತಿಗೆಯನ್ನು ಆಚರಣೆಯ ಮುಖ್ಯ ವ್ಯಕ್ತಿ ಎಂದು ನಂಬುತ್ತಾರೆ.

ತಮಿಳುನಾಡು ಮತ್ತು ಕೇರಳದಂತಹ ಭಾಗದಲ್ಲಿ ಈ ಸಮಾರಂಭವನ್ನು ಒಂದು ಧಾರ್ಮಿಕ ಹಬ್ಬದ ಆಚರಣೆಯನ್ನಾಗಿ ಪರಿಗಣಿಸುತ್ತಾರೆ. ಮತ್ತು ಅವರ ರೂಡಿಗನುಗುಣವಾಗಿ “ಅವಿಟಂ” ನೊಂದಿಗೆ ( ಬ್ರಾಹ್ಮಣ ಸಮುದಾಯದವರು ವಾರ್ಷಿಕ ದಾರ ಬದಲಾವಣೆಯ ಸಮಾರಂಭದೊಂದಿಗೆ ಆಚರಣೆ ಮಾಡುತ್ತಾರೆ. ಜೊತೆಗೆ ರಾಕಿ ಕಟ್ಟುವುದರೊಂದಿಗೆ ಕುಟುಂಬದ ಭೋಜನವೂ ಇರುತ್ತದೆ.

ಈಶಾನ್ಯ ಭಾರತಗಳಾದ ಅಸ್ಸಾಂನಲ್ಲಿ “ಬಿಹು” ಮತ್ತು ಮಣಿಪುರದಲ್ಲಿ “ಕಾಂಗ್” ಎಂಬ ಹೆಸರಿನಿಂದ ರಕ್ಷಾಬಂಧನದ ಆಚರಣೆ ನಡೆಯುತ್ತದೆ. ಇಲ್ಲಿ ವಿಶೇಷವಾಗಿ ಶ್ರೀ ಕೃಷ್ಣನನ್ನು ಪೂಜಿಸಲಾಗುತ್ತದೆ. ಹಾಗೂ ನೃತ್ಯ ಸಂಗೀತಗಳನ್ನೊಳಗೊಂಡಂತೆ ರಾಖಿಯನ್ನ ಕಟ್ಟಿ ಸಂಭ್ರಮಾಚರಣೆ ಮಾಡುತ್ತಾರೆ.

ಗುಜರಾತ್ ನಲ್ಲಿ ಈ ಆಚರಣೆಯನ್ನ “ಶಿವ”ನಿಗೆ ಅರ್ಪಿಸಲಾಗುತ್ತದೆ. ಭಕ್ತರು ಶಿವನ ದೇವಾಲಯಕ್ಕೆ ತೆರಳಿ ದೇವರಿಗೆ ಹಾಲು, ನೀರು, ಮತ್ತು ಬಿಲ್ವಪತ್ರೆಯನ್ನು ನೀಡಿ ಶಿವನ ಪ್ರಸಾದ ಹಾಗೂ ಆಶೀರ್ವಾದವನ್ನು ಪಡೆದು ಸಂಭ್ರಮಾಚರಣೆ ಮಾಡುತ್ತಾರೆ.

ಪ್ರಸ್ತುತತೆಯ ಆಚರಣೆ
ಇಂದಿನ ಕಾಲಘಟ್ಟದಲ್ಲಿ ಬಂಧ, ಸಂಬಂಧಗಳ, ಗಟ್ಟಿತನ ಹಾಗೂ ನಂಬಿಕತೆಗಳು ಮಾಯವದಂತೆ ಭಾಸವಾಗುತ್ತಿದೆ. ಕಾರಣ ರಕ್ಷಾಬಂಧನದ ಸುಧೀನ ಆಚರಣೆ, ಆಚಾರ, ವಿಚಾರ ಗಳ ಅರಿವು ಜನರಲ್ಲಿ ಮರೆಮಾಚುತ್ತಾ ಬರುವುದು ಸಹಜವಾಗಿದೆ. ಈ ಆಚರಣೆಯನ್ನ ಸಂಬಂಧಕ್ಕಿಂತಲೂ ಅಧಿಕವಾಗಿ ವ್ಯವಹಾರಕ್ಕೆ ನಡೆಸುತ್ತಿರುವ ಹಾಗೆ ಕಾಣುತ್ತಿದೆ. ಕೆಲವು ಸಹೋದರಿಯರು ಹಣಕ್ಕಾಗಿ “ರಾಖಿ” ಯನ್ನು ಸಹೋದರನಿಗೆ ಕಟ್ಟುತ್ತಿದ್ದಾರೆ. ಸಹೋದರರು ಸಹ ಹೇಳಿಕೆಗಳಿಗಷ್ಟಕ್ಕನುಗುಣವಾಗಿ “ರಾಖಿ” ಕಟ್ಟಿಸಿಕೊಳ್ಳುತ್ತಿದ್ದಾರೆ, ಹಾಗಾಗಿ ರಕ್ಷಾ ಬಂಧನದ

ಆಚರಣೆಗೆ ತನ್ನದೇ ಆದಂತಹ ಮೌಲ್ಯ ವಿರುವುದರಿಂದ ಅದನ್ನು ಈಗಿನ ವ್ಯವಹಾರಿಕ ಆಚರಣೆಯನ್ನಾಗಿ ಸಂಭ್ರಮಿಸದೆ, ಪೂರ್ವಜರ ಸುಸರ್ಜಿತವಾದ ರೀತಿ- ನೀತಿಗಳಲ್ಲಿ ಆಚರಿಸಿದರೇ ಉತ್ತಮ ಮತ್ತು ಸಂಬಂಧಕ್ಕೊಂದು ಬೆಲೆ ಲಭಿಸಿದಂತಾಗುತ್ತದೆ.

ಬರಹ : ಪವನ್ ಕುಮಾರ್ ಎಂ. ಕೆ.
ಬಿ. ವೋಕ್ ಡಿಎಂಎಫ್ಎಂ, ಎಸ್‌ಡಿಎಂ ಕಾಲೇಜು, ಉಜಿರೆ































































































error: Content is protected !!
Scroll to Top