ಕಾರ್ಕಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ಕಾರ್ಕಳ : ಕುಂದಾಪ್ರ ಕನ್ನಡವು ಕನ್ನಡ ಭಾಷೆಯ ಅವಿಭಾಜ್ಯ ಅಂಗ. ಇದರ ಜೋರು, ರಾಪು, ಜಾಪು, ತನಿ, ಒಯ್ಲು, ಹೊಯ್ಲು ಮತ್ತು ರಭಸ ಅತ್ಯಂತ ವಿಶಿಷ್ಟ. ಮಾತಾಡದೇ ಅದೆಷ್ಟೋ ಭಾಷೆಗಳು ಕಳೆದು ಹೋಗಿವೆ. ಕುಂದಾಪ್ರ ಕನ್ನಡ ಹಾಗಾಗಬಾರದಾದರೆ ತಮ್ಮ ಮಕ್ಕಳು ಎಲ್ಲೇ ಇರಲಿ, ಮನೆಯಲ್ಲಾದರೂ ಇದೇ ಭಾಷೆಯಲ್ಲಿ ಮಾತಾಡುವಂತೆ ಕುಂದಗನ್ನಡದ ಹೆತ್ತವರು ಆಸಕ್ತಿ ವಹಿಸಬೇಕು. ಹಾಗಾದಲ್ಲಿ ಮಾತ್ರ ಈ ಸತ್ವಯುತ ಶಕ್ತಿಶಾಲಿ ಭಾಷೆ ಉಳಿದು ಬೆಳೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕಾಧ್ಯಕ್ಷ, ಸಾಹಿತಿ ಐರೋಡಿ ಶಂಕರನಾರಾಯಣ ಹೆಬ್ಬಾರ್ ಅಭಿಪ್ರಾಯಪಟ್ಟರು.

ಅವರು ಜು. 24 ರಂದು ಕನ್ನಡ ಸಾಹಿತ್ಯ ಪರಿಷತ್‌ ಕಾರ್ಕಳ ತಾಲೂಕು ಘಟಕದ ವತಿಯಿಂದ ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ, ಎಲ್ಲ ಪ್ರಾದೇಶಿಕ ಆಡುಗನ್ನಡಗಳೂ ಶ್ರೇಷ್ಠವೇ. ಕುಂದಾಪ್ರ ಕನ್ನಡವೇ ಶ್ರೇಷ್ಠ ಎಂಬ ಅಂಧಾಭಿಮಾನ ನಮ್ಮದಲ್ಲ ಎಂದ ಅವರು ಈ ಭಾಷೆಯೊಂದಿಗೆ ಬದುಕು ಹೇಗೆ ಹಾಸುಹೊಕ್ಕಾಗಿದೆಯೆಂದು ಎಂಬುದನ್ನು ಬಣ್ಣಿಸಿ ಭಾಷೆ ಬೇರೆ ಅಲ್ಲ, ಬದುಕು ಬೇರೆ ಅಲ್ಲ ಎಂದು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಜ್ಞಾನಸುಧಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಸುಧಾಕರ ಶೆಟ್ಟಿ ಮಾತನಾಡಿ, ಕಾರ್ಕಳದಲ್ಲಿ ಕುಂದಗನ್ನಡದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿರುವುದು ಭಾಷಾ ಸಾಮರಸ್ಯಕ್ಕೊಂದು ಮಾದರಿ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ರಾಮಕೃಷ್ಣ ಆಚಾರ್ ಮಾತನಾಡಿ, ಆಡುಭಾಷೆ ನಮ್ಮ ನೈಜ ಭಾವನೆಗಳನ್ನು ಪೋಷಿಸಿ ಬದುಕನ್ನು ಸಮೃದ್ಧಗೊಳಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಕಾರ್ಕಳದ ಜನತೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿತ್ಯಾನಂದ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಗುಣಪಾಲ ಕಡಂಬ, ಕಾರ್ಕಳ ರೋಟರಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು.

ವಿಶೇಷ ತಿಂಡಿ
ಆಷಾಡ ತಿಂಗಳ ವಿಶೇಷ ಖಾದ್ಯಗಳಾದ ಮರಗೆಸದ ಪತ್ರೊಡೆ, ಅತ್ತಾಸು, ಹಲಸಿನ ಹಣ್ಣಿನ ಕಡಬ ಇತ್ಯಾದಿ ತಿನಿಸುಗಳಿದ್ದವು.
ಧಾರಣಿ ಉಪಾಧ್ಯ ಪ್ರಾರ್ಥಿಸಿ, ಗೀತಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್ ನಾಯ್ಕ ವಂದಿಸಿದರು. ನರಸಿಂಹ ಮೂರ್ತಿ, ಶಿವ ಸುಬ್ರಹ್ಮಣ್ಯ ಭಟ್, ಗಣೇಶ್ ಜಾಲ್ಸೂರು ಸಹಕರಿಸಿದರು.

































error: Content is protected !!
Scroll to Top