ಪಂಚ ಗ್ಯಾರಂಟಿ ಯೋಜನೆ ಅರ್ಹರಿಗೆ ತಲುಪಲಿ : ಅಶೋಕ್ ಕೊಡವೂರು

ಉಡುಪಿ : ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೂ ತಲುಪಿಸುವ ಕಾರ್ಯವಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್ ಕೊಡವೂರು ತಿಳಿಸಿದರು.
ಅವರು ಜೂ. 27ರಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂಬ ಮಹತ್ವಾಕಾಂಕ್ಷಿ ಯೋಜನೆ ಪಂಚ ಗ್ಯಾರಂಟಿ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಇವು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ತಲುಪಿಸುವ ಕಾರ್ಯವನ್ನು ಮಾಡಬೇಕು ಎಂದು ಕರೆ ನೀಡಿದರು.

ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿದೆ 2023 ರ ಜೂನ್‌ನಿಂದ ಈವರೆಗೆ ಜಿಲ್ಲೆಯಲ್ಲಿ 2.57 ಕೋಟಿ ರೂ. ಗೂ ಹೆಚ್ಚು ಮಹಿಳೆಯರು ಸಂಚರಿಸಿದ್ದು, 90.10 ಕೋಟಿ ರೂ. ಭರಿಸಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ 2023 ರ ಆಗಸ್ಟ್ ನಿಂದ ಈವರೆಗೆ 2.25 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಪ್ರತೀ ತಿಂಗಳು 2000 ರೂ.ವಿನಂತೆ ಈವರೆಗೆ 870.83 ಕೋಟಿ ರೂ. ನೀಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2023 ರ ಆಗಸ್ಟ್ ನಿಂದ ಈವರೆಗೆ 2.81 ಲಕ್ಷ ಗೃಹ ಬಳಕೆ ಗ್ರಾಹಕರಿಗೆ 438.14 ಕೋಟಿ ರೂ. ಉಚಿತ ವಿದ್ಯುತ್ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ 2023 ರ ಜುಲೈ ನಿಂದ ಜನವರಿ 2025 ರ ವರೆಗೆ ಡಿಬಿಟಿ ಮೂಲಕ 1,98,825 ಫಲಾನುಭವಿಗಳಿಗೆ 225.65 ಲಕ್ಷ ರೂ. ಭರಿಸಲಾಗಿದೆ, ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 3762 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಡಿಬಿಟಿ ಮೂಲಕ ಪ್ರತೀ ತಿಂಗಳು 5 ಕೋಟಿ 82 ಲಕ್ಷ ರೂ. ಗೂ ಹೆಚ್ಚು ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಯುವನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಈ ಯೋಜನೆಯ ಬಗ್ಗೆ ಹೆಚ್ಚು ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದರೊಂದಿಗೆ ಫಲಾನುಭವಿಗಳ ಸಂಖ್ಯೆಗಳನ್ನು ಹೆಚ್ಚಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಐದು ಗ್ಯಾರಂಟಿ ಯೊಜನೆಗಳಿಗೆ ಶೇ. 95 ಕ್ಕಿಂತಲೂ ಹೆಚ್ಚು ಫಲಾನುಭವಿಗಳಾಗಿದ್ದಾರೆ. ಬಾಕಿ ಉಳಿದ ಅರ್ಹ ಪ್ರತಿಯೊಬ್ಬ ಫಲಾನುಭವಿಗಳಿಗೂ ಈ ಯೋಜನೆಯ ಪ್ರಯೋಜನ ತಲುಪಬೇಕು ಎಂದರು.

ಉಡುಪಿ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಗ್ರಾಮೀಣ ಭಾಗಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್‌ ಸಂಚಾರ ಕೋವಿಡ್ ಅನಂತರದಲ್ಲಿ ಸ್ಥಗಿತವಾಗಿದೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ಯತೆಯ ಮೇಲೆ ಬಸ್‌ಗಳ ಪುನರ್ ಸಂಚಾರವಾಗಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.

ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಅಧ್ಯಕ್ಷೆ ಡಾ. ಸುನೀತಾ ಶೆಟ್ಟಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೆ ಫಲಾನುಭವಿಗಳಾಗಿ ಅದರ ಪ್ರಯೋಜನ ಪಡೆಯುತ್ತಿದ್ದ ಮನೆಯ ಯಜಮಾನಿ ಮರಣ ಹೊಂದಿದ್ದಲ್ಲಿ ಅವರ ಮುಂದಿನ ಉತ್ತರದಾಹಿಗಳನ್ನು ಯಜಮಾನಿಯನ್ನಾಗಿಸಲು ಬಿ.ಪಿ.ಎಲ್. ಕಾರ್ಡ್‌ ತಿದ್ದುಪಡಿಗೆ ಕೊಟ್ಟಿದ್ದರೂ ಅವುಗಳ ತಿದ್ದುಪಡಿಯಾಗುತ್ತಿಲ್ಲ. ಇದರಿಂದ ಕೆಲವರಿಗೆ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ವೀಣಾ ವಾಗ್ಳೆ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗಡೆ ಕಾರ್ಕಳ, ಮೋಹನ್ ಪೂಜಾರಿ ಉಪ್ಪುಂದ, ಶಂಕರ್ ಶೇರಿಗಾರ್, ಹರಿಪ್ರಸಾದ್ ಶೆಟ್ಟಿ ಹಾಗೂ ನವೀನ್‌ಚಂದ್ರ ಎಸ್. ಸುವರ್ಣ, ಸಮಿತಿಯ ಸದಸ್ಯರಾದ ಮಂಜುನಾಥ್ ಕುಲಾಲ್, ಸಯ್ಯದ್ ಕುರ್ಖಾನ್ ಯಾಸೀನ್, ರೋಷನ್ ಶೆಟ್ಟಿ, ಚಂದ್ರಶೇಖರ್ ಬಾಯರಿ, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

































































error: Content is protected !!
Scroll to Top