ಕಾರ್ಕಳ : ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಜೂ. 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಜೀವಶಾಸ್ತ್ರ ಉಪನ್ಯಾಸಕ ಗುರುಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯ ಜವಾಬ್ದಾರಿ ನಮ್ಮದಾಗಿದೆ. ಪರಿಸರ ಸ್ವಚ್ಛವಾಗಿದ್ದಲ್ಲಿ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ. ಮಾನವನ ಬೇಜವಾಬ್ದಾರಿಯಿಂದ ಈಗಾಗಲೇ ಭೂಮಿ ಕಲುಷಿತಗೊಂಡು ಅನಾಹುತಗಳು ಸಂಭವಿಸುತ್ತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳೋಣ ಎಂದರು.
ಕಾಲೇಜು ಆಡಳಿತ ಮಂಡಳಿಯ ಸದಸ್ಯ ನದಾಫ್ ಅಹಮ್ಮದ್ ಮಾತನಾಡಿ, ಪರಿಸರ ಸ್ವಚ್ಛವಾಗಿದ್ದಲ್ಲಿ ಮನಸ್ಸು ಕೂಡ ಸ್ವಚ್ಚವಾಗಿರುತ್ತದೆ. ಹೆಚ್ಚು ಹೆಚ್ಚು ಗಿಡ ನೆಡುವುದರ ಮೂಲಕ ಪರಿಸರದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದು. ತನ್ಮೂಲಕ ಆರೋಗ್ಯಯುತವಾದ ಬದುಕನ್ನು ನಮ್ಮದಾಗಿಸಿಕೊಳ್ಳೋಣ ಎಂದು ಹೇಳಿದರು.
ಪ್ರೌಢಶಾಲಾ ಮುಖ್ಯಸ್ಥೆ ಶ್ರೀಮತಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥೆ ಲೊಲಿಟಾ ಡಿ’ಸಿಲ್ವಾ, ಕಾಲೇಜು ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್ ಸಂದರ್ಭೋಚಿತವಾಗಿ ಮಾತನಾಡಿ ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಕಾರ್ಕಳ ರೋಟರಿ ಆಸ್ಪತ್ರೆಗೆ ಭೇಟಿ ನೀಡಿ ಗಿಡಗಳನ್ನು ನೀಡಿದರು. ವೈದ್ಯಾಧಿಕಾರಿ ಡಾ. ಆಶಾ ಮತ್ತು ಇತರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಗಿಡಗಳನ್ನು ನೆಡುವುದರ ಮೂಲಕ ವಿದ್ಯಾರ್ಥಿಗಳೊಂದಿಗೆ ಪರಿಸರ ದಿನಾಚರಣೆಯನ್ನು ಸಂಭ್ರಮಿಸಿದರು.
ವಿದ್ಯಾರ್ಥಿಗಳಾದ ಜೈನಾಬ್ ಸ್ವಾಗತಿಸಿ, ಆಯೆಷಾ ಮೆಹರಿನ್ ಕಾರ್ಯಕ್ರಮ ನಿರೂಪಿಸಿದರು. ಅನನ್ಯಾ ವಂದಿಸಿದರು.









































