ಕಾರ್ಕಳ : ರಾಷ್ಟ್ರೀಯ ಹೆದ್ದಾರಿ-169 ಸಾಣೂರು ಪದ್ಮನಾಭ ನಗರದ ಗುಡ್ಡದ ತುದಿಯಲ್ಲಿರುವ ಹೈಟೆನ್ಶನ್ ಟವರ್ ಬುಡದಲ್ಲಿ ಕಳೆದ ಎರಡು ವರ್ಷಗಳ ಗ್ರಾಮಸ್ಥರ ಹೋರಾಟದ ನಂತರ ಹೆದ್ದಾರಿ ಇಲಾಖೆ ಗುಡ್ಡದ ಎತ್ತರದ ಅರ್ಧ ಭಾಗದವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿತ್ತು. ಆದರೆ, ತಡೆಗೋಡೆಯ ಮೇಲ್ಭಾಗಕ್ಕೆ ಕೇವಲ ಮಣ್ಣು ತುಂಬಿಸಿ ಅಸಮರ್ಪಕ ಕಾಮಗಾರಿ ನಡೆಸಿದ್ದು, ಇದೀಗ ಗುಡ್ಡ ಕುಸಿಯುವ ಪರಿಸ್ಥಿತಿ ಎದುರಾಗಿದೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ಹೇಳಿದ್ದಾರೆ.
ಗುಡ್ಡದ ಮಣ್ಣು ಕಲ್ಲುಗಳು ರಸ್ತೆಗೆ
ಇದೀಗ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗುಡ್ಡದ ಮೇಲಿನ ದೊಡ್ಡ ದೊಡ್ಡ ಕಲ್ಲುಗಳು ಹಾಗೂ ಮಣ್ಣು ಸರ್ವಿಸ್ ರಸ್ತೆಗೆ ಬೀಳುತ್ತಿದ್ದು, ವಾಹನಗಳಿಗೆ ಮತ್ತು ಸರ್ವಿಸ್ ರಸ್ತೆಯಲ್ಲಿ ನಡೆದಾಡುವ ಗ್ರಾಮಸ್ಥರಿಗೆ ಆತಂಕಕಾರಿಯಾಗಿ ಪರಿಣಮಿಸಿದೆ. ಮುಂಗಾರು ಪೂರ್ವದಲ್ಲಿ ಸುರಿಯುತ್ತಿರುವ ಒಂದೆರಡು ಮಳೆಗೆ ಈ ಪರಿಸ್ಥಿತಿಯಾದರೆ, ಮುಂದೆ ಜೂನ್‌ನಿಂದ ಪ್ರಾರಂಭವಾಗುವ ಮುಂಗಾರು ಮಳೆಗೆ ಖಂಡಿತವಾಗಿಯೂ ಗುಡ್ಡದ ಮಣ್ಣು ಜರಿದು ರಸ್ತೆಗೆ ಬಿದ್ದು ಇನ್ನಷ್ಟು ಅಪಾಯವಾಗುವ ಸಂಭವವಿದೆ ಎಂದು ನರಸಿಂಹ ಕಾಮತ್ ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಯವರು, ಶಾಸಕರು, ಸಂಸದರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ನಿರ್ದೇಶನ ನೀಡಿ ಮಾಡಿಸಿದ ಈ ತಡೆಗೋಡೆ ನಿರ್ಮಾಣ ಕಾರ್ಯ ಗುಡ್ಡದ ಎತ್ತರ ಮತ್ತು ಉದ್ದಕ್ಕೆ ಅರ್ಧ ಭಾಗಕಷ್ಟೇ ಮಾಡಿದೆ. ಉಳಿದರ್ದ ಭಾಗದ ಮಣ್ಣು ನಿರಂತರ ಜರಿದು ಬೀಳುವುದು ಖಂಡಿತ ಎಂದು ಅವರು ಹೇಳಿದ್ದಾರೆ.

ತಡೆಗೋಡೆ ವಿಸ್ತರಣೆಯಾಗಿಲ್ಲ
ಸಾಣೂರು ಯುವಕಮಂಡಲದ ಆಟದ ಮೈದಾನದ ಅಂಚಿಗೆ ತಡೆಗೋಡೆಯನ್ನು ವಿಸ್ತರಣೆ ಮಾಡುವಂತೆ ಸಂಸದರಾದ ಕೋಟಾ ಶ್ರೀನಿವಾಸ್ ಪೂಜಾರಿಯವರ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪ್ರಸ್ತಾವನೆಯನ್ನು ಕೂಡ ಕಳುಹಿಸಲಾಗಿದೆ. ಆದರೂ ಈವರೆಗೆ ತಡೆಗೂಡೆ ವಿಸ್ತರಣಾ ಕಾರ್ಯಕ್ಕೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿಲ್ಲ. ಜನಸಾಮಾನ್ಯರಿಗೆ ಅರ್ಥವಾಗುವ ವಿಚಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಅರ್ಥವಾಗದೆ ಇರುವುದು ವಿಪರ್ಯಾಸ ಎಂದಿದ್ದಾರೆ.
ಜನಾಕ್ರೋಶವನ್ನು ಎದುರಿಸಲು ಸಿದ್ಧರಾಗಿ
ಕೇವಲ ಜನರ ಒತ್ತಡಕ್ಕೆ ಮಣಿದು ಅರೆಬರೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪರಿಸರದ ಜನತೆ ಹಿಡಿ ಶಾಪ ಹಾಕುತ್ತಿದ್ದು, ಕೂಡಲೇ ಗುಡ್ಡದ ಮಣ್ಣು ರಸ್ತೆಗೆ ಬೀಳದಂತೆ ಸುರಕ್ಷಿತವಾಗಿ ತಡೆಗೋಡೆ ಕಾಮಗಾರಿಯನ್ನು ಸಂಪೂರ್ಣಗೊಳಿಸದಿದ್ದರೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸಾಣೂರು ಗ್ರಾಮಸ್ಥರ ಆಕ್ರೋಶಕ್ಕೆ ತುತ್ತಾಗಬೇಕಾಗಿದೀತೆಂದು ನರಸಿಂಹ ಕಾಮತ್ ಎಚ್ಚರಿಸಿರುತ್ತಾರೆ.
























