ಕಾರ್ಕಳ : ಪರವಾನಗಿ ರಹಿತ ಜಲ್ಲಿ, ಕೆಂಪು ಕಲ್ಲು, ಪಾದೆ ಕಲ್ಲು ಸಾಗಾಟಕ್ಕೆ ಕಾನೂನು ನಿಯಮದಡಿ ಪೊಲೀಸರು ಕಠಿಣ ನಿರ್ಬಂಧ ಹೇರುತ್ತಿರುವ ಪರಿಣಾಮ ಕಾಮಗಾರಿಗಳಿಗೆ ತೊಡಕಾಗಿದ್ದು ಇದರಿಂದ ಕಾರ್ಮಿಕ ವರ್ಗ ತೀರಾ ಸಂಕಷ್ಟಕ್ಕೆ ಗುರಿಯಾಗಿದೆ. ಕಾಮಗಾರಿಗಳು ನಡೆಯದೇ ಕಾರ್ಮಿಕರು ಕೆಲಸವಿಲ್ಲದೇ ತೊಂದರೆಗೀಡಾಗಿದ್ದಾರೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಸಾವಿರಾರು ಕಾರ್ಮಿಕರಿದ್ದು ಕೆಲಸವಿಲ್ಲದೇ ಅವರ ಬದುಕು ದುಸ್ಥಿತಿಯಲ್ಲಿದೆ.
ಒಂದು ಕಡೆಯಲ್ಲಿ ಕೆಲಸವಿಲ್ಲ. ಇನ್ನೊಂದು ಕಡೆ ಸರಕಾರದಿಂದ ದೊರೆಯುತ್ತಿದ್ದ ಸೌಲಭ್ಯವೂ ಮರೀಕಚಿಕೆಯಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ ಸಿಗುತ್ತಿದ್ದ ಪಿಂಚಣಿ (ತಿಂಗಳಿಗೆ 3 ಸಾವಿರ ರೂ.) ಪಾವತಿಯಾಗುತ್ತಿಲ್ಲ. ಕಾರ್ಮಿಕ ಕಿಟ್, ಕಾರ್ಮಿಕರ ಮಕ್ಕಳಿಗೆ ಸಿಗುತ್ತಿದ್ದ ವಿದ್ಯಾರ್ಥಿ ವೇತನ, ನಿವೃತ್ತಿ ವೇತನ ಅವೆಲ್ಲವೂ ಇದೀಗ ಸ್ಥಗಿತಗೊಂಡಿದೆ.
14 ಸಾವಿರ ಕಾರ್ಮಿಕರು
ಕಾರ್ಕಳ ತಾಲೂಕಿನಲ್ಲಿ ನೋಂದಾವಣೆಯಾಗಿರುವ ಕಾರ್ಮಿಕರ ಒಟ್ಟು ಸಂಖ್ಯೆ 14 ಸಾವಿರ. ನೊಂದಾವಣೆಗೊಳ್ಳದ ಕಾರ್ಮಿಕರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ವಾಣಿಜ್ಯ ಕಟ್ಟಡ ಹಾಗೂ ಮನೆ ನಿರ್ಮಾಣ, ಬಾವಿ ರಚನೆ, ಮರಳುಗಾರಿಕೆ, ಕಲ್ಲಿನ ಕೋರೆಗಳಲ್ಲಿ, ಗಾರೆ ಕೆಲಸ, ಕ್ರಷರ್, ಸೆಂಟ್ರಿಂಗ್ ಕಾಮಗಾರಿ, ರಸ್ತೆ ಡಾಮಾರೀಕರಣ ಕೆಲಸಗಳಲ್ಲಿ ಇವರೆಲ್ಲ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಸಕಾಲಕ್ಕೆ ಕಚ್ಚಾವಸ್ತು ಪೂರೈಕೆಯಾಗದೇ ಇದ್ದಲ್ಲಿ ಕಾಮಗಾರಿಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು ಕಾರ್ಮಿಕರಿಗೆ ವರ್ಷವಿಡೀ ದೊರೆಯದೇ ಆರ್ಥಿಕವಾಗಿ ಬಳಲುವಂತಾಗಿದೆ.
ಸರಕಾರದ ನಿಯಮವನ್ನು ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿರುವ ಕಾರಣ ಬಡ ಕಾರ್ಮಿಕರಿಗೆ ಬಹಳ ತೊಂದರೆಯಾಗುತ್ತಿದೆ. ಕಾನೂನು ಕಟ್ಟಳೆ ಎಂದು ಕಟ್ಟಡ ನಿರ್ಮಾಣ ಕಾಮಗಾರಿಗೆ ಬೇಕಾದ ಸಾಮಗ್ರಿಗಳ ಸಾಗಾಟವನ್ನು ತಡೆಯುವ ಕಾರಣ ಅದರ ನೇರ ಹೊಡೆತ ಕಾರ್ಮಿಕರ ಮೇಲಾಗುತ್ತಿದೆ.
ಸುಜಿತ್ ಸಫಲಿಗ
ಪ್ರಧಾನ ಕಾರ್ಯದರ್ಶಿ
ಕಟ್ಟಡ ಕಾರ್ಮಿಕ ಹಿತರಕ್ಷಣಾ ವೇದಿಕೆ

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾರ್ಮಿಕರು ಕೆಲಸವಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಕಾರ್ಮಿಕರ ಹಿತದೃಷ್ಟಿಯಿಂದ ಆದರೂ ನಿಯಮಗಳಲ್ಲಿ ಸ್ವಲ್ಪ ಸಡಿಲಿಕೆ ಮಾಡುವುದು ಒಳಿತು. ಸಂಬಂಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ನಮ್ಮ ಆಗ್ರಹ.
ಪ್ರದೀಪ್ ಜೋಡುಕಟ್ಟೆ, ಗುತ್ತಿಗೆದಾರರು








































