ಕಾರ್ಕಳ : ಯರ್ಲಪಾಡಿ ಗ್ರಾಮಸ್ಥರ ಬಹುದಿನದ ಬೇಡಿಕೆಯೊಂದು ಈಡೇರಿದ್ದು ಸರಕಾರಿ ಬಸ್ ಸಂಚಾರ ಸೇವೆಯು ಲಭ್ಯವಾಗಲಿದೆ ಎಂದು ಯರ್ಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುನಿಲ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಹಲವಾರು ಗ್ರಾಮ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದ ಸರಕಾರಿ ಬಸ್ ಸಂಚಾರದ ಬೇಡಿಕೆಯು ಫಲಪ್ರದವಾಗುವ ಸಂದರ್ಭವು ಕೂಡಿ ಬಂದಿದೆ. ಪ್ರತಿ ದಿನ ಉಡುಪಿ – ಮಣಿಪಾಲ- ಹಿರಿಯಡ್ಕ- ಪಂಚನಬೆಟ್ಟು- ಗೋವಿಂದೂರು- ಬೈಲೂರು- ಕಾಂತರಗೋಳಿ- ಚಿಕ್ಕಲ್‌ಬೆಟ್ಟು- ಹಿರ್ಗಾನ- ಕಾರ್ಕಳ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚರಿಸಲಿದ್ದು, ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಯರ್ಲಪಾಡಿ ಗ್ರಾಮಸ್ಥರ ಈ ಬೇಡಿಕೆ ಸಾಕಾರಗೊಳ್ಳುವಲ್ಲಿ ವಿಶೇಷವಾಗಿ ಸ್ಪಂದಿಸಿ ಸಹಕರಿಸಿದ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಹಾಗೂ ಸರಕಾರದ ಸಾರಿಗೆ ಇಲಾಖೆಗೆ ಯರ್ಲಪಾಡಿ ಗ್ರಾಮಸ್ಥರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಸುನಿಲ್ ಹೆಗ್ಡೆ ಪ್ರಕಟನೆಯಲ್ಲಿ ಹೇಳಿದ್ದಾರೆ.








































