ಕಾರ್ಕಳ : ತಾಲೂಕಿನ ಗ್ರಾಮೀಣ ಭಾಗದಲ್ಲಿ, ಕಾಡಂಚಿನ ಪ್ರದೇಶದಲ್ಲಿ ಚಿರತೆ ಹಾವಳಿ ಸಾಮಾನ್ಯವಾಗಿತ್ತು. ಆದರೆ, ಇದೀಗ ನಗರ ಭಾಗದಲ್ಲೂ ಚಿರತೆಗಳು ಕಾಣಸಿಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಏ. 26ರಂದು ಕಾರ್ಕಳ ವೆಂಕಟರಮಣ ದೇಗುಲದ ಕೆರೆಯ ಸಮೀಪ ಶ್ರೀನಿವಾಸ ಕಲ್ಯಾಣ ಮಂಟಪದ ಬಳಿ ನಾರಾಯಣ ಮಲ್ಯರ ಮನೆಯ ಹತ್ತಿರ ಚಿರತೆ ಕಾಣಿಸಿಕೊಂಡಿದೆ. ಈ ವೇಳೆ ಸ್ಥಳೀಯರಾದ ಅಭಿಷೇಕ್ ಶೆಣೈ ಅವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಸ್ಥಳಕ್ಕೆ ರಾತ್ರಿಯೇ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.
ಏ. 23ರಂದು ಪೆರ್ವಾಜೆಯ ಮನೆಯೊಂದರ ಟೆರೇಸ್ ಮೇಲೆ ಚಿರತೆ ಕಾಣಿಸಿಕೊಂಡಿದ್ದು ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು. ಇದೀಗ ನಗರ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಪೆರ್ವಾಜೆ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆ ಅಲ್ಲಿ ಬೋನ್‌ಗಳನ್ನು ಇರಿಸಲಾಗಿದೆ. ಆದರೆ ಚಿರತೆ ಸ್ಥಳದಿಂದ ಸ್ಥಳಕ್ಕೆ ಪಲಾಯನ ಮಾಡುತ್ತಿರುವುದರಿಂದ ನಿರ್ದಿಷ್ಟ ಸ್ಥಳದಲ್ಲಿ ಬೋನ್ ಇರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತಾಗಿ ಇಲಾಖೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಸ್ಥಳಾಂತರಿಸಿಕೊಂಡು ಚಿರತೆ ಕಾಡು ಸೇರಿಕೊಂಡಲ್ಲಿ ಸಮಸ್ಯೆಯಿಲ್ಲ ಎಂದು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಹೇಳಿದ್ದಾರೆ.




































