ಯುಗಾದಿ ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈ

ಕನಸು ಮತ್ತು ವಾಸ್ತವಗಳ ಸಂಗಮವಾದ ಯುಗದ ‘ಆದಿ’ ಯುಗಾದಿ ಮತ್ತೆ ಬಂದಿದೆ. ಯುಗಯುಗಗಳನ್ನು ಬೆಸೆಯುವ ಈ ಹಬ್ಬ ನಮ್ಮ ಕನಸುಗಳನ್ನು ಸಾಕಾರಗೊಳಿಸುವ ನವಚೈತನ್ಯ ಮತ್ತು ವಾಸ್ತವಗಳಿಗೆ ಪ್ರತ್ಯಕ್ಷವಾಗಿ ಸೆಣಸುವ ದೃಢ ಸಂಕಲ್ಪ ಮಾಡಬೇಕೆಂಬ ಸಂದೇಶ ಸಾರುವ ಬೇವು-ಬೆಲ್ಲದ ಹಬ್ಬವೂ ಆಗಿದೆ. ಹಳೆಯದನ್ನು ಮರೆತು ಹೊಸದರತ್ತ ಮುನ್ನುಡಿ ಇಡುವ, ಹೊಸ ಆಲೋಚನೆಯತ್ತ ಕರೆದೊಯ್ದು ಬದುಕನ್ನು ಚಲನಶೀಲಗೊಳಿಸುವ ಈ ಹಬ್ಬ ಹಿಂದೂಗಳಿಗೆ ಅಮೃತ ಕಾಲವೂ ಹೌದು. ಹೊಸ ಚೈತನ್ಯವನ್ನು ಮನ-ಮನಗಳಲ್ಲಿ ಮೂಡಿಸುವ, ನೋವು-ನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನಕ್ಕೆ ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಆದ್ದರಿಂದಲೇ ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ
ಬನಬನದಲಿ ಅಚ್ಚಾಗಿದೆ
ಹೊಸ ವರ್ಷದ ಹೆಸರು
ಪಲ್ಲವಗಳ ಪಲ್ಲವಿಯು
ಗರಿಗೆದರಿದೆ ಗೀತವು!’…
ಎಂದು ಯುಗಾದಿಯ ಮಹಿಮೆಯನ್ನು ಹಾಡಿ ಹೊಗಳಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಪರಂಪರೆ ಪುರಮೆರವಣಿಗೆಯ ಸಾಲಿನಂತೆ ಬರುವ ಹಬ್ಬಗಳಲ್ಲಿ ಮೊದಲನೇಯದೇ ಯುಗಾದಿ. ಹೊಸ ಸಂವತ್ಸರದ ಬಾಗಿಲನ್ನು ತೆರೆಯುವ ಕೀಲಿಕೈಯಂತಾಗಿದೆ. ಯುಗಾದಿ ಬದುಕಿನಲ್ಲಿ ಹೊಸತನವನ್ನು ಅಳವಡಿಸುವ ಹಬ್ಬವೂ ಹೌದು. ಋತುಗಳ ರಾಜ ವಸಂತ ಕಾಲ ಆಗಮನದ ಹಬ್ಬವಾದ ಯುಗಾದಿ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಹರುಷ ತರುತ್ತದೆ.

ಆಚರಣೆ

ಹೊಸ ವರ್ಷದ ಮೊದಲ ಹಬ್ಬ ಇದಾಗಿರುವುದರಿಂದ ಮನೆ-ಮನೆಯಲ್ಲಿ ಹಬ್ಬದ ರಂಗು ಮೂಡುತ್ತದೆ. ಪ್ರಾತಃಕಾಲದಲ್ಲಿ ಎದ್ದವರು ನಿತ್ಯಕರ್ಮಗಳನ್ನು ಮುಗಿಸಿ ಅಭ್ಯಂಜನ ಮಾಡಿ, ಮನೆಯನ್ನು ತಳಿರು-ತೋರಣಗಳಿಂದ, ಮಾವು-ಬೇವಿನ ಸೊಪ್ಪಿನಿಂದ ಸಿಂಗರಿಸಿ, ಹೊಸ ಬಟ್ಟೆ ಧರಿಸಿ ಕುಲದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವುದು ಅನಂತರ ಪಂಚಾಂಗ ಶ್ರವಣ ಈ ದಿನದ ವಿಶೇಷ. ಉತ್ತರ ಕನಾ೯ಟಕದಲ್ಲಿ ಈ ಹಬ್ಬದ ಚೆಂದವೇ ಬೇರೆ.
ಯುಗಾದಿಯ ಬಿದಿಗೆ ಚಂದ್ರ ದರ್ಶನಕ್ಕೆ ವಿಶೇಷ ಮಹತ್ವ ಇದೆ. ಚೌತಿಯ ಚಂದ್ರನ ದರ್ಶನದಿಂದಾದ ದೋಷ ನಿವಾರಣೆ ಬಿದಿಗೆ ಚಂದ್ರನ ದರ್ಶನದಿಂದಾಗುತ್ತದೆಂಬ ಪ್ರತೀತಿ ನಮ್ಮ ಶಾಸ್ತ್ರದಲ್ಲಿ ಇದೆ.
ನಾಡಿನಾದ್ಯಂತ ಎಲ್ಲರ ಮನೆ-ಮನಗಳ ಅಂಗಳದಲ್ಲಿ ಸಂಭ್ರಮ-ಸಡಗರ ಇಂದು ತುಂಬಿರುತ್ತದೆ. ದೇವಸ್ಥಾನಗಳಲ್ಲಿ ಘಂಟೆಯ ನಿನಾದ, ತುಪ್ಪದದೀಪ, ಮಂಗಳಾರತಿ ಇಂದಿನ ವಿಶೇಷ. ಈ ದಿನದ ಮತ್ತೊಂದು ಆಕರ್ಷಣೆಯೆಂದರೆ ಬೇವು-ಬೆಲ್ಲವನ್ನು ಸೇವಿಸುವುದು. ಸರ್ವೇ ಜನೋ ಸುಖಿನೋ ಭವಂತು ಎಂಬ ಆಶಯದೊಂದಿಗೆ ಬೇವು-ಬೆಲ್ಲವನ್ನು ಸ್ವೀಕರಿಸುವುದು ಯುಗಾದಿಯ ಸದಾಶಯವನ್ನು ನೆನಪಿಸುತ್ತದೆ.
ಕಳೆದು ಹೋದ ವರುಷದ ನೆನಪುಗಳನ್ನು ಮೆಲುಕು ಹಾಕುತ್ತಾ ಮುಂದೆ ಸಾಧಿಸಬೇಕೆನ್ನುವುದಕ್ಕೆ ಸಂಕಲ್ಪ ತೊಡುವಂತೆ ಮಾಡುವ ಯುಗಾದಿ ಸುಖ-ದುಃಖಗಳ ರೂಪ.

ಪಂಚಾಂಗ ಶ್ರವಣ

ಹೊಸ ಸಂವತ್ಸರದ ಪಂಚಾಂಗಕ್ಕೆ ಅದರ ಶ್ರವಣಕ್ಕೆ ಎಲ್ಲಿಲ್ಲದ ಬೇಡಿಕೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿಗೆ ಎಲ್ಲಿಲ್ಲದ ಮಹತ್ವವಿದೆ. ಹೊಸ ಋತುಚಕ್ರ, ಮೇಷಾದಿ ಮಾಸ-ಲಗ್ನಗಳು ಅಶ್ವಿನ್ಯಾದಿ ಮಳೆ ನಕ್ಷತ್ರಗಳು, ಹಬ್ಬ-ಜಾತ್ರೆ, ರಥೋತ್ಸವ-ಮದುವೆ… ಇತ್ಯಾದಿ ಇಂದೇ ಆರಂಭವಾಗುವುದರಿಂದ ಇಂದು ಪಂಚಾಂಗಗಳಾದ… ತಿಥಿ (ಐಶ್ವರ್ಯ), ನಕ್ಷತ್ರ (ಆಯುರ್ ವೃದ್ಧಿ) ವಾರ (ಪಾಪ ಪರಿಹಾರ), ಯೋಗ (ರೋಗ ನಿವಾರಣೆ), ಕರಣ (ಕಾರ್ಯಸಿದ್ಧಿ)ಗಳ ಬಗ್ಗೆ ತಿಳಿಯುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಬಹುಹಿಂದಿನಿಂದಲೂ ಇದೆ.

ವ್ಯವಸಾಯಕ್ಕೆ ಸಿದ್ಧವಾಗಿರುವ ರೈತ ತನ್ನ ಜಮೀನು ಈ ಬಾರಿಯಾದರೂ ಹೊನ್ನಾಗಲಿ ಎಂದು ಪ್ರಾರ್ಥಿಸುತ್ತ ಹೊಲವನ್ನು ಉಳುವ ಮೂಲಕ ಕೃಷಿ ಬದುಕಿಗೆ ಮುನ್ನಡಿ ಇಡುತ್ತಾನೆ. ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಮೆರವಣಿಗೆ ಮಾಡುತ್ತಾರೆ. ಯುಗಾದಿಯಂದು ಕ್ರೀಡೋತ್ಸವ ನಡೆಯುತ್ತದೆ. ಮನೆಯಂಗಳದ ಆಟಕ್ಕೆ ಹೆಚ್ಚು ಒತ್ತು ಸಿಗುತ್ತದೆ. ಹಳೇ ಮೈಸೂರು ಪ್ರಾಂತ್ಯದಲ್ಲಿ ಯುಗಾದಿ ಸಮಯದಲ್ಲಿ ಕಾರ್ಡ್ಸ್ ಆಟದ ಗಮ್ಮತ್ತೆ ಹೆಚ್ಚು.

ವಿಶಿಷ್ಟ ಅಡುಗೆ

ಇಂದು ಎಲ್ಲರ ಮನೆಯಲ್ಲೂ ಘಮ-ಘಮಿಸುವ ಅಡುಗೆ ಸಿದ್ಧವಾಗುತ್ತದೆ. ಮಾವಿನಕಾಯಿಯ ಚಿತ್ರಾನ್ನ, ಬಗೆಬಗೆಯ ಭಕ್ಷ್ಯಗಳು ದೇವರ ನೈವೇದ್ಯಕ್ಕೆ ಸಿದ್ಧವಾಗುತ್ತವೆ.

ಕಾಲದಂತೆ ಬದಲಾಗೋಣ

ಪ್ರಕೃತಿಯಲ್ಲಾಗುವ ಬದಲಾವಣೆಯಂತೆ ನಮ್ಮ ಈ ಬದುಕು ಸದಾ ಬದಲಾವಣೆಗೆ ತೆರೆದುಕೊಂಡಿರಬೇಕು. ಸಿಹಿ-ಕಹಿಯನ್ನು ಸಮಾನವಾಗಿ ಸ್ವೀಕರಿಸಬೇಕು. ನಿರಾಶೆಗಳಿಗೆ ಕುಗ್ಗದೆ ಆಶಾವಾದಿಯಾಗಿರಬೇಕು. ಪ್ರಕೃತಿಯಲ್ಲಿರುವ ಸಮಯ ಪ್ರಜ್ಞೆಯನ್ನು ನಾವು ನಮ್ಮ-ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡುವುದೇ ಈ ಹಬ್ಬದ ವಿಶೇಷ.
ಪ್ರಕೃತಿಯು ಈ ಹಬ್ಬದಿಂದ ಮುಂದೆ ಯಾವ ರೀತಿಯಲ್ಲಿ ಬದಲಾವಣೆಯಾಗಿ ಹೊಸ ವಧುವಿನಂತೆ ಸಿಂಗಾರಗೊಂಡು ಸಕಲ ಜೀವರಾಶಿಗೆ ಆಶ್ರಯ ನೀಡುತ್ತದೆಯೋ ಅದೇ ರೀತಿ ನಾವು ಕೂಡ ಹೊಸ ಉತ್ಸಾಹದಿಂದ ನಮ್ಮ ಕಾಯ೯ ಮಾಡಬೇಕು ನಮ್ಮ ಕೆಲಸದಲ್ಲಿ ಭಗವಂತನನ್ನು ಕಾಣುವುದೇ ಸಾಥ೯ಕವಾಗಬೇಕು.
ಬದುಕಿನಲ್ಲಿ ಉದಾಸೀನ ತೊರೆದು, ವಿಶಾಲ ಹೃದಯದ ಮನುಷ್ಯರಾದಾಗ ಮಾತ್ರ ಯುಗಾದಿಹಬ್ಬದ ನಿಜವಾದ ಅರ್ಥ. ಬೇವು ತಿಂದವರಿಗೆ ಬೆಲ್ಲ ತಿನ್ನಿಸುವ, ಪರಿಪಾಠವನ್ನು ಬೆಳೆಸುವುದೇ ಯುಗಾದಿ ಹಬ್ಬ ಆಚರಣೆಯ ಆಶಯ. ಯುಗಾದಿ ಒಂದು ದಿನದ ಜಾತ್ರೆಯಾಗುವುದು ಬೇಡ. ಅದು ನೂರು ದಿನದ ಜಾತ್ರೆಯಾಗಲಿ ದಾರಿದ್ರ್ಯ ತೊಲಗಿ ಬಾಳು ಬೆಳಗುವಂತಾಗಲಿ.
ಈ ಯುಗಾದಿ ಸಂದರ್ಭದಲ್ಲಾದರೂ ಒಳ್ಳೆಯದರತ್ತ ಹೋಗೋಣ, ಆಲೋಚಿಸೋಣ, ಕಾರ್ಯ ಸನ್ನದ್ಧರಾಗೋಣ. ಬದಲಾವಣೆ ಇಂದಿನಿಂದ ಪ್ರಾರಂಭವಾಗಲಿ, ನಮ್ಮ ಗುರಿ ತಲುಪಲು ಪ್ರಯತ್ನ ನಿರಂತರವಾಗಲಿ. ಈ ಪ್ರಯತ್ನದಲ್ಲಿ ಹಲವಾರು ರೀತಿಯ ಕಷ್ಟ-ನಷ್ಟ ಎದುರಾದರೂ ಎದೆಗುಂದದೆ ಗುರಿಯತ್ತ ದೃಷ್ಟಿಯಿರಲಿ. ಖಂಡಿತವಾಗಿಯೂ ನಾವು ಗೆಲ್ಲುತ್ತೇವೆ. ಧನಾತ್ಮಕ ಚಿಂತನೆಯ ಹಾದಿ ನಮ್ಮದಾಗಲಿ.
ಯುಗ ಯುಗದಲ್ಲಿ ಇದೇ ರೀತಿ ಯುಗಾದಿ ಬರಲಿ.































































































error: Content is protected !!
Scroll to Top