ಮಂಗಳೂರು : ಪಿಜಿಗೆ ಸಿಂಗಲ್ ಸ್ಟಾರ್ ರೇಟಿಂಗ್ ನೀಡಿದ ಹಿನ್ನೆಲೆಯಲ್ಲಿ ಪಿಜಿ ಮಾಲೀಕ ಆತನ ಸಹಚರರೊಂದಿಗೆ ಸೇರಿ ಎಂಜಿನೀಯರಿಂಗ್ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಮಾ. 17ರಂದು ಮಂಗಳೂರಿನಲ್ಲಿ ನಡೆದಿದೆ. 18 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮೇಲೆ ಪಿಜಿ ಮಾಲೀಕ ಸಂತೋಷ್ ತನ್ನ ನಾಲ್ವರು ಸಹಚರರೊಂದಿಗೆ ಹಲ್ಲೆ ನಡೆಸಿರುವ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಲಬುರಗಿ ಮೂಲದ ವಿಕಾಸ್ ಎಂಬಾತ ಕಳೆದ ಆರು ತಿಂಗಳಿನಿಂದ ಪಿಜಿಯಲ್ಲಿ ವಾಸಿಸುತ್ತಿದ್ದು, ಅನಂತರ ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದರು.
ತಾನು ಈ ಹಿಂದೆ ಇದ್ದ ಪಿಜಿ ಬಗ್ಗೆ ವಿಕಾಸ್ ನಕಾರಾತ್ಮಕ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದರು. ಆಹಾರದಲ್ಲಿ ಕೀಟಗಳ ಪತ್ತೆ, ಕಳಪೆ ಗುಣಮಟ್ಟದ ಆಹಾರ, ನೈರ್ಮಲ್ಯವಿಲ್ಲದ ಪರಿಸರ, ಇನ್ನಿತರ ಸಮಸ್ಯೆಗಳನ್ನು ಎತ್ತಿ ತೋರಿಸಿ ಪಿಜಿಗೆ ಸಿಂಗಲ್-ಸ್ಟಾರ್ ರೇಟಿಂಗ್ ನೀಡಿದ್ದರು. ಇದರಿಂದ ಕೋಪಗೊಂಡ ಪಿಜಿ ಮಾಲೀಕ ಸಂತೋಷ್, ವಿಕಾಸ್‌ಗೆ ಬೆದರಿಕೆ ಹಾಕಿ ಗೂಗಲ್‌ನಲ್ಲಿ ಕಮೆಂಟ್ ಅನ್ನು ಅಳಿಸುವಂತೆ ಒತ್ತಾಯಿಸಿರುತ್ತಾನೆ. ಇದಕ್ಕೆ ವಿಕಾಸ್ ನಿರಾಕರಿಸಿದಾಗ, ಸಂತೋಷ್ ಇತರ ನಾಲ್ವರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ವಿಮರ್ಶೆಯನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ. ಸಂತ್ರಸ್ತನ ದೂರಿನ ಮೇರೆಗೆ ಪಿಜಿ ಮಾಲೀಕರು ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.



















