ಕಾರ್ಕಳ : ಬೆಳ್ಮಣ್ ಗ್ರಾಮದಲ್ಲಿ ನಡೆದ ಮಾಂಗಲ್ಯ ಸರ ಕಳವು ಪ್ರಕರಣ ಮತ್ತು ಮುಂಡ್ಕೂರು ಗ್ರಾಮದಲ್ಲಿ ನಡೆದ ಕಾಂಕ್ರಿಟ್ ಮಿಲ್ಲರ್ ಮಿಕ್ಸರ್ ಮಿಷನ್ ಕಳವು ಪ್ರಕರಣದ ಆರೋಪಿಗಳನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಾಂಗಲ್ಯ ಸರ ಕಳವು ಪ್ರಕರಣ
ಬೆಳ್ಮಣ್ ಗ್ರಾಮದ ಪಟ್ರೆಗುತ್ತು ಮೇಲ್ಮನೆ ನಿವಾಸಿ ನಾರಾಯಣ ತಂತ್ರಿ (82) ಅವರ ಹೆಂಡತಿ ಲೀಲಾ (79) ಅವರು 1 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದು ಅವರನ್ನು ನೋಡಿಕೊಳ್ಳಲು 2024ರ ಡಿಸೆಂಬರ್ ತಿಂಗಳಿನಲ್ಲಿ ಗೌರಿ ಎಂಬಾಕೆಯನ್ನು ಹೋಂ ನರ್ಸ್ ಕೆಲಸಕ್ಕಿಟ್ಟಿದ್ದರು. ಜ. 3ರಂದು ಆಕೆ ಊರಿಗೆ ಹೋಗಿದ್ದು, ಅದೇ ದಿನ ಲೀಲಾ ಅವರ ಕುತ್ತಿಗೆಯಲ್ಲಿದ್ದ 3,50,000 ರೂ. ಬೆಲೆ ಬಾಳುವ ಸುಮಾರು 6 ಪವನ್ ಚಿನ್ನದ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿರುತ್ತದೆ. ಈ ವೇಳೆ ಗೌರಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಗೌರಿಯೇ ಕಳವು ಮಾಡಿರಬಹುದು ಎಂದು ಅನುಮಾನಗೊಂಡು ನಾರಾಯಣ ತಂತ್ರಿಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಗೌರಿ ಮಾಂಗಲ್ಯ ಸರ ಕಳವು ಮಾಡಿ ಅದನ್ನು ಚಾಮರಾಜ ನಗರ ಜಿಲ್ಲೆಯ ಸೋಮಣ್ಣ ಎಂಬಾತನಿಗೆ ನೀಡಿರುವುದು ತಿಳಿದು ಬಂದಿರುತ್ತದೆ. ಇದೀಗ ಆರೋಪಿ ಸೋಮಣ್ಣನ್ನು ಮೈಸೂರಿನಲ್ಲಿ ಪೊಲೀಸರು ಬಂಧಿಸಿದ್ದು, ಮಾಂಗಲ್ಯ ಸರವನ್ನು ವಶಕ್ಕೆ ಪಡೆದಿದ್ದಾರೆ. ಗೌರಿ ಬಂಧನದ ಕುರಿತಾಗಿ ತನಿಖೆ ನಡೆಯುತ್ತಿದೆ.
ಕಾಂಕ್ರಿಟ್ ಮಿಲ್ಲರ್ ಮಿಕ್ಸರ್ ಮಿಷನ್ ಕಳವು ಪ್ರಕರಣ
ಗದಗದ ಸುನಿಲ್ ಕುಮಾರ್ ರೋಣ ಎಂಬವರು ಮುಂಡ್ಕೂರು ಗ್ರಾಮದ ಪೊಸ್ರಾಲ್ ಎಂಬಲ್ಲಿ ಹಾದು ಹೋಗುವ ಜಾರಿಗೆಕಟ್ಟೆ-ಸಚ್ಚೇರಿಪೇಟೆಯಲ್ಲಿ ಫೆ. 15ರಂದು ಚರಂಡಿ ಕೆಲಸಕ್ಕಾಗಿ ಸಾರ್ವಜನಿಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಅಶ್ವಿತ್ ಎಂಬವರ ಮಾಲಕತ್ವದ 35,000 ರೂ. ಮೌಲ್ಯದ ಕಾಂಕ್ರಿಟ್ ಮಿಲ್ಲರ್ ಮಿಕ್ಸರ್ ಮಿಷನ್ ಕಳವಾಗಿರುವ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಳ್ಳತನ ಮಾಡಿದ ಆರೋಪಿಗಳಾದ ಕಿನ್ನಿಗೋಳಿಯ ಮಂಜುನಾಥ ಮತ್ತು ಮೂಲ್ಕಿಯ ಗೌತಮ್ ನನ್ನು ಕಿನ್ನಿಗೋಳಿಯಲ್ಲಿ ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ, ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಮತ್ತು ಸಿಪಿಐ ಕಾರ್ಕಳ ಇವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ. ಸುಂದರ, ಎ.ಎಸ್.ಐ. ಪ್ರಕಾಶ್, ಸಿಬ್ಬಂದಿ ಚಂದ್ರಶೇಖರ, ರುದ್ರೇಶ್, ಮಹಾಂತೇಶ, ರವೀಂದ್ರ ಎಂ., ಜೀಪು ಚಾಲಕ ಅಶೋಕ್ ಅವರನ್ನು ಒಳಗೊಂಡ ತಂಡ ಪಾಲ್ಗೊಂಡಿದ್ದು, ಜಿಲ್ಲಾ ಸಿಡಿಆರ್ ಸೆಕ್ಷನ್‌ನ ದಿನೇಶ್ ನಾಯ್ಕ್ ಸಹಕರಿಸಿರುತ್ತಾರೆ.




























































