ಹೀರೋಯಿನ್‌ ಮಾಡುತ್ತೇವೆ ಎಂದು ನಂಬಿಸಿ ಮಾಜಿ ಮುಖ್ಯಮಂತ್ರಿ ಮಗಳಿಗೆ 4 ಕೋ.ರೂ ವಂಚನೆ

ಮುಂಬಯಿ : ಬಾಲಿವುಡ್‌ ಸಿನಿಮಾಗಳಲ್ಲಿ ಹೋರೊಯಿನ್‌ ಮಾಡುತ್ತೇವೆ ಎಂದು ನಂಬಿಸಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಪುತ್ರಿ ಆರುಷಿ ನಿಶಾಂಕ್‌ಗೆ ವಂಚಕರು 4 ಕೋಟಿ ರೂ. ಪಂಗನಾಮ ಪ್ರಕರಣ ಬೆಳಕಿಗೆ ಬಂದಿದೆ.

ಮುಂಬಯಿಯ ಜುಹು ಪ್ರದೇಶದ ಇಬ್ಬರು ವ್ಯಕ್ತಿಗಳು ಚಲನಚಿತ್ರ ನಿರ್ಮಾಪಕರೆಂದು ಹೇಳಿಕೊಂಡು ಆರುಷಿಯಿಂದ 4 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಆರುಷಿಗೆ ಬಾಲ್ಯದಿಂದಲೇ ನಟನೆಯತ್ತ ಆಕರ್ಷಣೆಯಿತ್ತು. ಈಗಾಗಲೇ ಹಲವಾರು ಸಣ್ಣ ಬಜೆಟ್‌ನ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವಂತವಾಗಿ ಸಿನಿಮಾಗಳನ್ನು ನಿರ್ಮಿಸಲು ಹಿಮಶ್ರೀ ಫಿಲ್ಮ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ.

ಮುಂಬಯಿನ ಮಾನ್ಸಿ ವರುಣ್ ಬಾಗ್ಲಾ ಮತ್ತು ವರುಣ್ ಪ್ರಮೋದ್ ಕುಮಾರ್ ಬಾಗ್ಲಾ ಎಂಬಿಬ್ಬರು ತಮ್ಮನ್ನು ಚಿತ್ರ ನಿರ್ಮಾಪಕರು ಎಂದು ಪರಿಚಯಿಸಿಕೊಂಡು ಆರುಷಿ ಮನೆಗೆ ಬಂದಿದ್ದಾರೆ. ತಮ್ಮ ಮುಂಬರುವ ಚಿತ್ರ ‘ಆಂಖೋಂ ಕಿ ಗುಸ್ತಖಿಯಾ’ದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಲು ಆರುಷಿಯಿಂದ 5 ಕೋಟಿ ರೂ. ಕೇಳಿದರು. ಚಿತ್ರ ಬಿಡುಗಡೆಯಾದ ನಂತರ, ಶೇ.20ರಷ್ಟು ಬಡ್ಡಿಯೊಂದಿಗೆ 15 ಕೋಟಿ ರೂ.ಗಳನ್ನು ಹಿಂದಿರುಗಿಸಲಾಗುವುದು ಎಂದು ಅವರಿಗೆ ಭರವಸೆ ನೀಡಲಾಯಿತು. ಆರುಷಿ ಒಪ್ಪಿಕೊಂಡು ಅವರಿಗೆ ನಾಲ್ಕು ಕಂತುಗಳಲ್ಲಿ ಒಟ್ಟು 4 ಕೋಟಿ ರೂ. ನೀಡಿದ್ದಾರೆ.

ನನ್ನ ಸ್ಕ್ರೀಪ್ಟ್ ಅನ್ನು ತಾವೇ ಫೈನಲ್ ಮಾಡುವುದಕ್ಕೂ ಅವಕಾಶವಿದೆ. ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಮಾಡಲು ಅವಕಾಶ ನೀಡುವುದಾಗಿ ಹೇಳಿದ್ದರು. ಫೆಬ್ರವರಿ 2ರಂದು ಭಾರತದಲ್ಲಿ ಆಗಬೇಕಾದ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಲಾಗಿದ್ದು, ಉಳಿದ ಭಾಗವನ್ನು ಯುರೋಪಿನಲ್ಲಿ ಚಿತ್ರೀಕರಿಸುವ ಯೋಜನೆ ಮಾಡಲಾಗಿದೆ. ಆದರೆ ನನ್ನನ್ನು ಆಯ್ಕೆ ಮಾಡಿದ್ದ ಸ್ಥಾನದಲ್ಲಿ ಬೇರೆ ನಟಿಯನ್ನು ಆಯ್ಕೆ ಮಾಡಲಾಗಿದೆ. ತನ್ನ ಹಣ ಹಿಂದಿರುಗಿಸಿ ಕೊಡುವಂತೆ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರುಷಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.































error: Content is protected !!
Scroll to Top