ಬೆಂಗಳೂರು : ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನು ಓದಲಿ, ನಂತರ ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್ ಓದಲಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಹರಿಹಾಯ್ದಿದ್ದಾರೆ.
ಸಾಮಾಜಿಕ ಜಾಲತಾನ X ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನದ 178ನೇ ವಿಧಿಯ ಪ್ರಕಾರ ವಿಧಾನಸಭೆಯ ಸಭಾಧ್ಯಕ್ಷರು ಮತ್ತು ಉಪಸಭಾಧ್ಯಕ್ಷರನ್ನು ವಿಧಾನಸಭೆಯೇ ಆಯ್ಕೆ ಮಾಡುತ್ತದೆ. 182ನೇ ವಿಧಿಯ ಪ್ರಕಾರ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿಯನ್ನು ವಿಧಾನಪರಿಷತ್ತೇ ಆಯ್ಕೆ ಮಾಡುತ್ತದೆ. ಈ ಕನಿಷ್ಠ ಸಾಂವಿಧಾನಿಕ ಜ್ಞಾನವೂ ಇಲ್ಲದೆ ಬಿಜೆಪಿ ನಾಯಕರು ತೌಡು ಕುಟ್ಟುವುದನ್ನು ಬಿಡಲಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಹೆಸರನ್ನು ಅನುಮೋದಿಸಿ ಪ್ರಕಟಿಸಿದೆ ಅಷ್ಟೇ, ಅವರನ್ನು ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡಿಲ್ಲ. ಸದನದಲ್ಲಿ ನಡೆಯಬೇಕಾದ ಅಧಿಕೃತ ಆಯ್ಕೆ ಪ್ರಕ್ರಿಯೆ ಎಂದಿನಂತೆಯೇ ನಡೆಯಲಿದೆ. ಪಕ್ಷದ ಅಭ್ಯರ್ಥಿಯ ಘೋಷಣೆಗೂ, ಸದನ ನಡೆಸುವ ಸಾಂವಿಧಾನಿಕ ಆಯ್ಕೆಗೂ ಇರುವ ವ್ಯತ್ಯಾಸ ತಿಳಿಯದೆ ಸಂವಿಧಾನ ವಿರೋಧಿ ಎಂದು ಕೂಗುವುದು ಅಜ್ಞಾನದ ಪ್ರದರ್ಶನವಲ್ಲದೆ ಮತ್ತೇನು? 2019ರಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವೇ ಕರ್ನಾಟಕ ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಅಂತಿಮಗೊಳಿಸಿ, ನಾಮಪತ್ರ ಸಲ್ಲಿಸುವಂತೆ ನಿರ್ದೇಶಿಸಿರಲಿಲ್ಲವೇ ? 2024ರಲ್ಲಿ ಲೋಕಸಭೆಯ ಅಧಿಕೃತ ಚುನಾವಣೆಗೂ ಮೊದಲೇ ಓಂ ಬಿರ್ಲಾ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಪ್ರಕಟಿಸಿರಲಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.

2026ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೇ ಸದನದ ಆಯ್ಕೆಗೂ ಮೊದಲೇ ರಥೀಂದ್ರ ಬೋಸ್ ಅವರನ್ನು ಸ್ಪೀಕರ್ ಅಭ್ಯರ್ಥಿಯಾಗಿ ಬಹಿರಂಗವಾಗಿ ಘೋಷಿಸಿರಲಿಲ್ಲವೇ? ಬಿಜೆಪಿ ಮಾಡಿದರೆ ಅದು ʼಅಭ್ಯರ್ಥಿಯ ಆಯ್ಕೆʼ ಕಾಂಗ್ರೆಸ್ ಮಾಡಿದರೆ ಮಾತ್ರ ʼಸಂವಿಧಾನ ವಿರೋಧʼವೇ? ಅಷ್ಟಕ್ಕೂ ಸಂವಿಧಾನದ ಪಾವಿತ್ರ್ಯದ ಕುರಿತು ಬಿಜೆಪಿ ನಮಗೆ ಪಾಠ ಹೇಳುವ ಮೊದಲು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕೇ ಇಲ್ಲದ 12 ನಾಮನಿರ್ದೇಶಿತ ಸದಸ್ಯರ ಮತಗಳನ್ನು ಸೇರಿಸಿಕೊಂಡು, ಕೇವಲ ಆರು ಮತಗಳ ಅಂತರದಲ್ಲಿ ಗೆದ್ದ ಎಂ.ಕೆ. ಪ್ರಾಣೇಶ್ ರ ವಿಧಾನಪರಿಷತ್ತಿನ ಉಪಸಭಾಪತಿ ಎಂಬ ಸಾಂವಿಧಾನಿಕ ಹುದ್ದೆಯಲ್ಲಿ ಕೂರಿಸಿದಾಗ ಬಿಜೆಪಿಗೆ ಸಂವಿಧಾನ ನೆನಪಾಗಲಿಲ್ಲವೇ? ಎಂದಿದ್ದಾರೆ.



























