ಭಾವನಿಗೆ ಕತ್ತಿಯಿಂದ ಕಡಿದ ಭಾಮೈದ – ಕಾರ್ಕಳ ಶಿವತಿಕೆರೆಯಲ್ಲಿ ಹಾಡಹಗಲೇ ನಡೆದ ಘಟನೆ

ಕಾರ್ಕಳ : ಹಾಡಹಗಲೇ ಕತ್ತಿಯಿಂದ ಕಡಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ಶಿವತಿಕೆರೆಯಲ್ಲಿ ಫೆ. 3ರ ಮಧ್ಯಾಹ್ನ ನಡೆದಿದೆ. ಜೋಡುರಸ್ತೆ ನಿವಾಸಿ ಮಹಮ್ಮದ್‌ ರಿಜ್ವಾನ್‌ ಎಂಬಾತನಿಗೆ ಆತನ ಪತ್ನಿಯ ಅಣ್ಣ ಅ‍ಶ್ರಫ್‌ ರೆಂಜಾಳ ಕತ್ತಿಯಿಂದ ಕಡಿದಿರುತ್ತಾನೆ. ತಲೆ, ಕುತ್ತಿಗೆ, ಕಾಲಿಗೆ ಇರಿದಿದ್ದು, ಗಂಭೀರವಾಗಿ ಗಾಯಗೊಂಡಿರುವ ರಿಜ್ವಾನ್‌ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ರವಾನಿಸಲಾಗಿದೆ.

ಕಾರ್ಕಳ ಬೈಪಾಸ್‌ ರಸ್ತೆಯ ಶಿವತಿಕೆರೆಗೆ ರಿಜ್ವಾನ್‌ನನ್ನು ಕರೆಸಿಕೊಂಡ ಅಶ್ರಫ್‌ ಕಾರಿನಿಂದ ಇಳಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುತ್ತಾನೆ. ಈ ವೇಳೆ ಅದೇ ರಸ್ತೆಯಾಗಿ ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಯೋರ್ವರು ಗಾಯಾಳನ್ನು ಆಟೋದಲ್ಲಿ ಕುಳ್ಳಿರಿಸಿ ಆಸ್ಪತ್ರೆ ಸಾಗಿಸಿದ್ದಾರೆ.

ತಂಗಿ ಆತ್ಮಹತ್ಯೆ
ಅಶ್ರಫ್‌ನ ತಂಗಿ ಮೈಮುನಾ 2017ರಲ್ಲಿ ಕಸಬಾ ಗ್ರಾಮ ಜೋಡುರಸ್ತೆಯ ಮಹಮ್ಮದ್‌ ರಿಜ್ವಾನ್‌ನನ್ನು ಮದುವೆಯಾಗಿದ್ದರು. ಗಂಡನ ಮನೆಯವರು ಹಿಂಸೆ, ಕಿರುಕುಳ ತಾಳಲಾರದೇ ನ. 28ರಂದು ಮೈಮುನಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡಿದ್ದ ಆಕೆ ಚಿಕಿತ್ಸೆ ಫಲಿಸದೇ ಡಿ. 2ರಂದು ಸಾವಿಗೀಡಾದರು.

ಮೈಮೂನಾಳಿಗೆ ಆಕೆಯ ಅತ್ತೆ ನೂರ್‌ಜಾನ್‌, ಮಾವ ಮೊಹಮ್ಮದ್‌ ಶರೀಪ್‌, ಸಿರಾಜ್‌, ಸಿರಾಜ್‌ನ ಹೆಂಡತಿ ರಫಾತ್‌, ಅಬ್ದುಲ್‌ ಖಾದರ್‌, ಮಜೀದ್‌, ಮೆಹರುನ್ನಿಸಾ ಮತ್ತು ದಿಲ್‌ಷಾದ್‌ ಅವರು ಮಾನಸಿಕ ಹಿಂಸೆ ನೀಡಿರುವ ಕುರಿತು ಮೈಮನಾ ಅಕ್ಕ ರಶೀದಾ ಬಾನು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.























































error: Content is protected !!
Scroll to Top