ವೈಭವದಿಂದ ಜರುಗಿದ ವಾರ್ಷಿಕ ಉತ್ಸವ
ಅತ್ತೂರು : ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಉತ್ಸವಕ್ಕೆ ಗುರುವಾರ ತೆರೆಬೀಳಲಿದೆ. ಭಾನುವಾರದಿಂದ ತೊಡಗಿದ ಉತ್ಸವ ವೈಭವದಿಂದ ಜರುಗಿದ್ದು, ಅನೇಕ ಗಣ್ಯರು ಭೇಟಿ ನೀಡಿದ್ದಾರೆ. ಜನರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದಾರೆ. ಕೊನೆಯ ದಿನವಾದ ಗುರುವಾರ 8 ಬಲಿಪೂಜೆಗಳನ್ನು ಅರ್ಪಿಸಲಾಗುತ್ತದೆ. ಕೊನೆಯ ಬಲಿಪೂಜೆ ರಾತ್ರಿ 8.30ಕ್ಕೆ ನೆರವೇರಿದ ಬಳಿಕ ಹಬ್ಬದ ಧ್ವಜವನ್ನು ಇಳಿಸಲಾಗುತ್ತದೆ.
ನಾಲ್ಕು ದಿನಗಳಲ್ಲಿ ಸಾವಿರಾರು ಜನರು ಸಂತ ಲಾರೆನ್ಸ್ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾರೆ. ಐದು ದಿನಗಳ ಉತ್ಸವದಲ್ಲಿ ಬುಧವಾರ ಪ್ರಮುಖ ದಿನವಾಗಿತ್ತು. ದಿನವಿಡೀ ಹತ್ತು ಬಲಿಪೂಜೆಗಳನ್ನು ಅರ್ಪಿಸಲಾಯಿತು. ಪುಣ್ಯಕ್ಷೇತ್ರದದಲ್ಲಿ ಭಕ್ತರು ಒಂದುಗೂಡಿ ಭಕ್ತಿಕಾರ್ಯಗಳಲ್ಲಿ ಭಾವೈಕ್ಯ ಮೆರೆದರು. ಪಾಲಕ ಸಂತ ಲಾರೆನ್ಸರ ಸಮ್ಮುಖದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ 10ಕ್ಕೆ ಮಂಗಳೂರು ಧರ್ಮಕ್ಷೇತ್ರದ ನಿವೃತ ಧರ್ಮಾಧ್ಯಕ್ಷರು ಅತಿ ವಂದನೀಯ ಡಾ. ಅಲೋಶಿಯಸ್ ಪಾಲ್ ಡಿಸೋಜ ಹಬ್ಬದ ಬಲಿಪೂಜೆಯನ್ನು ಅರ್ಪಿಸಿದರು. ಉಳಿದ ಪೂಜೆಗಳನ್ನು ಧರ್ಮಗುರು ವಂ. ಸ್ವಾಮಿ (ಡಾ) ಜೆನ್ಸಿಲ್ ಆಳ್ವಾ, ಮಿಲಾಗ್ರಿಸ್ ಕ್ಯಾಥೆಡ್ರಲ್, ಶಿವಮೊಗ್ಗ ಧರ್ಮಕ್ಷೇತ್ರದ ವಂ.ಸ್ವಾಮಿ ಸ್ಟ್ಯಾನಿ ಡಿಸೋಜ, ಬಾರ್ಕೂರಿನ ವಂ.ಸ್ವಾಮಿ ರೊನಾಲ್ಡ್ ಮಿರಾಂಡಾ, ಅಡ್ಯಪಾಡಿಯ ವಂ.ಸ್ವಾಮಿ ಫ್ರಾನ್ಸಿಸ್ ರೊಡ್ರಿಗಸ್, ಚಿಕ್ಕಮಂಗಳೂರು ಧರ್ಮಕ್ಷೇತ್ರದ ವಂ.ಸ್ವಾಮಿ ಪಾವ್ಲ್ ಡಿಸೋಜ, ವಂ.ಸ್ವಾಮಿ ಸುನಿಲ್ ಡಿಸಿಲ್ವ, ಸಾಸ್ತಾನ ವಂ. ಸ್ವಾಮಿ ಜೋಸೆಫ್ ಸಿರಿಲ್ ಡಿಸೋಜ, ಕುಂದಾಪುರದ ಒಸಿಡಿ ಕಟ್ಕೆರೆ, ವಂ.ಸ್ವಾಮಿ ಕ್ಯಾನುಟ್ ಬಾರ್ಬೋಜ ಮಿಯಾರ್ ಅರ್ಪಿಸಿದರು.
ರೋಗಿಗಳಿಗೆ ಮತ್ತು ಬಳಲುತ್ತಿರುವವರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಿವೃತ್ತ ಲೋಕಾಯುಕ್ತ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಮಾಜಿ ಸಚಿವ ಅಭಯಚಂದ್ರ ಜೈನ್ ಭೇಟಿ ನೀಡಿ ಧರ್ಮಗುರುಗಳಿಗೆ ಶುಭಾಶಯ ತಿಳಿಸಿದರು.
















