ಉಡುಪಿ: ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ಸಾಲ ಬೇಕೆ ನಮ್ಮನ್ನು ಸಂಪರ್ಕಿಸಿ ಎಂದು ಹೇಳುವ ಕರಪತ್ರಗಳನ್ನು ಕಳೆದ ಕೆಲವು ದಿನಗಳಿಂದ ಮಲ್ಪೆ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಹಂಚುತ್ತಿರುವುದು ಗಮನಕ್ಕೆ ಬಂದಿದೆ. ಈ ಪುಟ್ಟ ಕರಪತ್ರದಲ್ಲಿ ಕೇಂದ್ರ ಸರಕಾರದ ಯೋಜನೆಯಡಿ ಎಲ್ಲ ತರದ ಬಿಸಿನೆಸ್ನವರಿಗೆ ಮತ್ತು ಹೊಸದಾಗಿ ಬಿಸಿನೆಸ್ ಶುರು ಮಾಡುವವರಿಗೆ ಸಾಲ ಸೌಲಭ್ಯಗಳಿಗಾಗಿ ಸಂಪರ್ಕಿಸಿ. ಸಬ್ಸಿಡಿ ಲೋನ್ಗಾಗಿ ಬೇಕಾದ ದಾಖಲೆಗಳು ಎಂದು ಬರೆದು ಅದರಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಸಹಿತ ಹಲವು ದಾಖಲೆಗಳ ಪಟ್ಟಿ ನೀಡಲಾಗಿದೆ. ಈ ಕರಪತ್ರದಲ್ಲಿ ಕೇವಲ ಮೊಬೈಲ್ ನಂಬ್ರ ಮಾತ್ರ ನೀಡಲಾಗಿದೆ, ಬೇರೆ ಯಾವುದೇ ಮಾಹಿತಿಯಿಲ್ಲ.
ಸರಕಾರದ ಅಧಿಕೃತ ಪರವಾನಗಿಯನ್ನು ಸೂಕ್ತ ಪ್ರಾಧಿಕಾರದಿಂದ ಪಡೆಯದೆ ಹಾಗೂ ಸಂಸ್ಥೆಯ ಹೆಸರು, ವಿಳಾಸ ತಿಳಿಸದೆ ಅನಧಿಕೃತವಾಗಿ ಈ ವ್ಯವಹಾರ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಾರ್ವಜನಿಕರು ಈ ರೀತಿಯ ಪ್ರಚೋದನೆಗೆ ಒಳಗಾಗದೆ ಯಾವುದೇ ರೀತಿಯ ವ್ಯವಹಾರ, ದಾಖಲೆ ನೀಡದಿರುವುದು ಒಳಿತು. ನೀಡಿ ಮೋಸ ಹೋದರೆ ಇದಕ್ಕೆ ಜಿಲ್ಲಾಡಳಿತ ಜವಾಬ್ದಾರಿಯಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಎಚ್ಚರಿಸಿದೆ.
































































