ಕೆಲವೇ ದಿನಗಳಲ್ಲಿ ಹೇಮಂತ ತದನಂತರ ಶಿಶಿರ ಋತುವಿನ ಆರಂಭವಾಗಿ ಚಳಿಗಾಲದ ಆಗಮನ. ದೇಹಬಲ ಹಾಗು ಜೀರ್ಣಶಕ್ತಿ ಹೆಚ್ಚುವ ಕಾಲವಿದು. ಈ ಋತುವಿನಲ್ಲಿ ಪಾಲಿಸಬೇಕಾದ ನಿಯಮದ ಬಗ್ಗೆ ತಿಳಿದುಕೊಳ್ಳೋಣ.
ಹೇಮಂತ ಹಾಗೂ ಶಿಶಿರ ಋತುವಿನಲ್ಲಿ ವಾತಾವರಣ ಶುಷ್ಕವಿರುತ್ತದೆ. ವಾತ ದೋಷ ಪ್ರಧಾನವಾಗಿರುತ್ತದೆ. ಪಿತ್ತ ದೋಷದ ಸಂಚಯವಾಗಿರುತ್ತದೆ. ದೇಹಬಲ ಹಾಗೂ ಜೀರ್ಣಶಕ್ತಿ ಪ್ರಬಲವಾಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಅಭ್ಯಂಗ ಸ್ವೇದನ ಮಾಡುವ ಸೂಕ್ತ ಕಾಲವಿದು. ಎಳ್ಳೆಣ್ಣೆಯನ್ನು ಬಳಸಿ ಅಭ್ಯಂಗ ಮಾಡುವುದು ಈ ಋತುವಿನಲ್ಲಿ ಉತ್ತಮ. ತದನಂತರ ಬೆಳಿಗ್ಗಿನ ಬಿಸಿಲಿಗೆ ಮೈಯನ್ನು ಕಾಯಿಸಿ, ನಂತರ ಸ್ನಾನವನ್ನು ಮಾಡಿದರೆ ಒಳ್ಳೆಯದು. ದೀಪಾವಳಿಯಲ್ಲಿ ಆರಂಭವಾಗುವ ಅಭ್ಯಂಗ ಸ್ನಾನ ಹೇಮಂತ ಶಿಶಿರ ಋತುವಿನಲ್ಲೂ ಮುಂದುವರಿಸಬೇಕಾಗುತ್ತದೆ. ತ್ವಚೆಯ ರಕ್ಷಣೆಗೆ ಇದು ಬಹಳ ಮುಖ್ಯ.

ಆಯುರ್ವೇದದ ಪಂಚಕರ್ಮದಲ್ಲಿ ವಿರೇಚನ (ಭೇದಿ) ಮಾಡುವ ಸೂಕ್ತ ಕಾಲವಿದು. ಆಹಾರದಲ್ಲಿ ಸಿಹಿ, ಹುಳಿ ಹಾಗೂ ಉಪ್ಪಿನ ಸೇವನೆ ಒಳ್ಳೆಯದು. ಇದು ವಾತ ದೋಷವನ್ನು ಸಮತೋಲನದಲ್ಲಿಡುತ್ತದೆ. ಅಕ್ಕಿ, ಗೋಧಿ, ಬಾರ್ಲಿ ಕಡಲೆ, ಹೆಸರುಬೇಳೆ ಒಳ್ಳೆಯದು. ಈ ಕಾಲದಲ್ಲಿ ತುಪ್ಪವನ್ನು ಬಳಸುವುದರಿಂದ ಪಿತ್ತ ಶಮನವಾಗುತ್ತದೆ. ಹಾಲು ಹಾಗು ಮಜ್ಜಿಗೆಗಳನ್ನು ಹೆಚ್ಚಾಗಿ ಬಳಸಿ. ಮಸಾಲೆ ಪದಾರ್ಥವಾದ ಕರಿ ಮೆಣಸು, ಏಲಕ್ಕಿ, ಚೆಕ್ಕೆ, ಜೀರಿಗೆ, ಅರಿಶಿನ ಬಳಸಿ.

ಬಿಸಿಯಾಗಿರುವ ತರಕಾರಿಯ ಸೂಪ್‌ಗಳನ್ನು ಕುಡಿಯಿರಿ. ಕಬ್ಬು, ಬೆಲ್ಲ, ಅಡುಗೆಗೆ ತೆಂಗಿನ ಎಣ್ಣೆ ಬಳಸಿರಿ. ತರಕಾರಿಗಳಲ್ಲಿ ಪಡವಲಕಾಯಿ, ಹಾಗಲಕಾಯಿ, ಬೂದುಗುಂಬಳಕಾಯಿ, ನೆಲ್ಲಿಕಾಯಿ, ಲಿಂಬೆ ಹಣ್ಣನ್ನು ಸೇವಿಸಿ. ಈ ಕಾಲದಲ್ಲಿ ಸಿಗುವಂತಹ ಎಲ್ಲಾ ಹಣ್ಣು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು.

ಚಳಿಗಾಲದಲ್ಲಿ ನೀರು ಕುಡಿಯುವುದನ್ನು ನಾವು ಮರೆಯುತ್ತೇವೆ. ಆದ್ದರಿಂದ ನೀರನ್ನು ನೆನಪಿನಿಂದ ಕುಡಿಯಿರಿ. ಶುಂಠಿ, ಚಕ್ಕೆ ಬಳಸಿ ಚಹಾವನ್ನು ಮಾಡಿ ಕುಡಿಯಿರಿ. ನೆಗಡಿ ಕೆಮ್ಮು ಬಾರದಂತೆ ಕರಿಮಣಿಸು, ಅರಶಿನ, ಬೆಲ್ಲ, ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕಷಾಯವನ್ನು ಮಾಡಿ ಸೇವಿಸಿ. ಕುಡಿಯುವ ನೀರಿನಲ್ಲಿ ತುಳಿಸಿಯನ್ನು ಹಾಕಿ ಇಟ್ಟು ನೀರನ್ನು ಕುಡಿಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

ಚಳಿಗಾಲದಲ್ಲಿ ಗಂಟು ನೋವು ಬರುವುದು ಸಾಮಾನ್ಯ. ಇದನ್ನು ತಡೆಯಲು ದಿನಾಲು ಎಣ್ಣೆಯನ್ನು ಬಳಸಿ ಅಭ್ಯಂಗ ಮಾಡಿರಿ. ದಿನಾಲು ಸೂರ್ಯೋದಯವಾದ ಮೇಲೆ ವಾಕಿಂಗ್ ಹೋಗೋದು ಒಳ್ಳೆಯದು. ಸೂರ್ಯೋದಯಕ್ಕಿಂತ ಮುಂಚೆ ಹೋಗುವುದು ಸೂಕ್ತವಲ್ಲ. ಶೀತವಾಗುವ ಸಾಧ್ಯತೆ ಇರುತ್ತದೆ. ಯೋಗಾಸನ ಪ್ರಾಣಾಯಾಮ ಧ್ಯಾನಗಳನ್ನು ಮಾಡಿರಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿಯ ರಸವನ್ನು ಸೇವಿಸಿ ಅಥವಾ ಬಿಸಿ ನೀರಿಗೆ ಲಿಂಬೆಹಣ್ಣನ್ನು ಹಿಂಡಿ ಸೇವಿಸಿ. ಹಗಲು ನಿದ್ದೆ ಹಿತಕರವಲ್ಲ. ಕಹಿ, ಒಗರು, ಕಷಾಯ ರಸ ಆಹಾರಗಳನ್ನು ದೂರವಿಡಿ. ಜಂಕ್ ಫುಡ್, ಐಸ್ ಕ್ರೀಮ್ ಪದಾರ್ಥಗಳನ್ನು ಸೇವಿಸಬೇಡಿ. ತ್ವಚೆಯನ್ನು ಚಳಿಯಿಂದ ರಕ್ಷಿಸಲು ಉಣ್ಣೆಯ ಸ್ವೆಟರ್ ಶಾಲ್‌ಗಳನ್ನು ಬಳಸಿ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಆಯುರ್ವೇದದಲ್ಲಿ ಪ್ರತಿಯೊಂದು ಋತುವಿನಲ್ಲಿ ಮಾಡಬೇಕಾದಂತಹ ಆಹಾರ ವಿಹಾರವನ್ನು ತಿಳಿಸಿದೆ. ಇದನ್ನು ಪಾಲಿಸುವುದರಿಂದ ನಮ್ಮ ಆರೋಗ್ಯ ನಮ್ಮ ಹಿಡಿತದಲ್ಲಿರುತ್ತದೆ.






































