ಸಮಾಜದ ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಕರೆ – ಪುನರ್ವಸತಿಗಾಗಿ ಸಹಾಯಧನ

ಉಡುಪಿ : ರಾಜ್ಯದ ಹಲವು ಪ್ರದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ನಕ್ಸಲ್ ಚಳುವಳಿ/ಎಡಪಂಥೀಯ/ತೀವ್ರಗಾಮಿ ಚಟುವಟಿಕೆಗಳು ಸಕ್ರಿಯವಾಗಿರುವುದು ಕಂಡುಬಂದಿರುತ್ತಿದೆ. ಅಂತಹ ಪ್ರದೇಶಗಳಲ್ಲಿ ನಿರುದ್ಯೋಗ, ಅಸಮಾನತೆಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುತ್ತದೆಂಬ ಅಪಪ್ರಚಾರವು ನಿರುದ್ಯೋಗಿ ಯುವಕರನ್ನು ನಕ್ಸಲ್ ಸಿದ್ಧಾಂತ/ಎಡಪಂಥೀಯ ಭಯೋತ್ಪಾದನೆ ಕಡೆಗೆ ಆಕರ್ಷಿತರಾಗುವಂತೆ ಮಾಡಿರುತ್ತದೆ. ರಾಜ್ಯ ಸರಕಾರವು ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಶ್ರಮಿಸುತ್ತಿದೆ. ಶರಣಾಗತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ನೀಡಬೇಕಾದ ಪ್ರೋತ್ಸಾಹಧನ/ಸಹಾಯಧನ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಪ್ರೋತ್ಸಾಹದಿಂದಾಗಿ ಭೂಗತರಾಗಿದ್ದ ಮಹಿಳೆಯರನ್ನೂ ಒಳಗೊಂಡಂತೆ 14 ಜನ ನಕ್ಸಲರು ಸರಾಕರ/ಜಿಲ್ಲಾಡಳಿತದ ಮುಂದೆ ಈವರೆಗೆ ಶರಣಾಗತರಾಗಿದ್ದಾರೆ. ಜಿಲ್ಲಾಡಳಿತವು ಇವರುಗಳ ಪುನರ್ವಸತಿಗಾಗಿ ಧನಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸಿರುತ್ತದೆ ಎಂದು ಡಿಜಿ ಐಎಸ್‌ಡಿ ಪ್ರೊನಬ್‌ ಮೋಹಂತಿ ತಿಳಿಸಿದ್ದಾರೆ. ಹೆಬ್ರಿಯಲ್ಲಿ ನ. 20ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಎಡಪಂಥೀಯ ತೀವ್ರಗಾಮಿಗಳ ವಾಪಸಾತಿಯನ್ನು ಸುಲಭಗೊಳಿಸುವುದು ಮತ್ತು ಎಡಪಂಥೀಯ ತೀವ್ರಗಾಮಿಗಳ ಹಿಂಸಾಚಾರವನ್ನು ದೂರವಿಡುವ/ದಾರಿ ತಪ್ಪಿದ ಯುವಕರು ಮತ್ತು ಎಡಪಂಥೀಯ ತೀವ್ರಗಾಮಿಗಳ ಬಲೆಗೆ ಸಿಲುಕಿರುವ ಹಾರ್ಡ್ ಕೋರ್ ನಕ್ಸಲರನ್ನು ತಡೆಯುವುದು ಇದರ ಉದ್ದೇಶವಾಗಿದೆ. ಈ ಯೋಜನೆಯು ಶರಣಾದ ನಕ್ಸಲರಿಗೆ ಲಾಭದಾಯಕ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಒದಗಿಸುವ ಮೂಲಕ, ಮತ್ತೆ ಉಗ್ರವಾದಕ್ಕೆ ಮರಳದಂತೆ ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ಯೋಜನೆಯಡಿಯಲ್ಲಿ ಸರ್ಕಾರದ ಪ್ರಯೋಜನಗಳಲ್ಲಿ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡು ಸರಕಾರದ ಎದುರು ನಕ್ಸಲರು ಶರಣಾಗುವಂತೆ ಮಾಡಲು ಪ್ರೋತ್ಸಾಹಿಸಲಾಗುತ್ತದೆ.

ಸರಕಾರವು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸಮಾಜದ ಹಿಂದುಳಿಯುವಿಕೆಯ ಕಾರಣಗಳನ್ನು ಗುರುತಿಸಿ, ಅಭಿವೃದ್ಧಿ ಕಾರ್ಯಗಳು ಅಂದರೆ, ಶಿಕ್ಷಣ, ಆರೋಗ್ಯ, ರಸ್ತೆ, ಕುಡಿಯುವ ನೀರು, ವಿದ್ಯುದ್ದೀಪ, ಉದ್ಯೋಗಾವಕಾಶಗಳು, ಕೌಶಲ್ಯ ತರಬೇತಿ ಮೊದಲಾದವುಗಳನ್ನು ನೀಡುವುದರೊಂದಿಗೆ ಆ ಭೂ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ.

ಈ ಹಿಂದೆ ಇದ್ದ ನಕ್ಸಲ್ ಶರಣಾಗತಿ ಯೋಜನೆಯನ್ನು ಉನ್ನತೀಕರಿಸುವುದರಿಂದ, ಹೆಚ್ಚಿನ ಸಂಖ್ಯೆಯ ನಕ್ಸಲರು/ಎಡಪಂಥಿಯ ಭಯೋತ್ಪಾದಕರು ಶರಣಾಗತರಾಗಿ, ಸಮಾಜದ ಮುಖ್ಯ ವಾಹಿನಿಗೆ ಬರಲು ಸಹಾಯವಾಗುತ್ತದೆ. ಈ ಯೋಜನೆಯಿಂದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ಸಹಕಾರಿಯಾಗಲಿದೆ. 29.11.2023 ಹಾಗೂ 6.1.2024ರ ಪತ್ರದಲ್ಲಿಡಿಜಿ ಮತ್ತು ಐಜಿಪಿ ರವರು ಶರಣಾಗತಿಯಾದ ನಕ್ಸಲರಿಗೆ ರಾಜ್ಯ ಸಮಿತಿಗೆ ಉಪ ನಿರ್ದೇಶಕರು, ಕೌಂಟರ್ ಇಂಟಲಿಜೆನ್ಸ್, ರಾಜ್ಯ ಗುಪ್ತವಾರ್ತೆ ಇವರನ್ನು ಸದಸ್ಯರನ್ನಾಗಿ ಸೇರಿಸಿ, ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ಪುನರ್‌ರ್ರಚಿಸುವಂತೆ ಮತ್ತು ಶರಣಾಗತರಾದವರು ವ್ಯಾಪಾರ ಅಥವಾ ವೃತ್ತಿ ನಡೆಸಲು ಒಲವು ತೋರಿಸಿದ್ದಲ್ಲಿ, ಆ ಬಗ್ಗೆ ಕೌಶಲ್ಯ ತರಬೇತಿ ಪಡೆಯಲು ಇಚ್ಚಿಸಿದ್ದಲ್ಲಿ, ಮಾನ್ಯತೆ ಪಡೆದ ತರಬೇತಿ ಸಂಸ್ಥೆಗೆ ದಾಖಲಾದ ನಂತರ ಅವರಿಗೆ ತಿಂಗಳಿಗೆ ರೂ. 5000 ರೂ. ಪ್ರೋತ್ಸಾಹ ಧನವನ್ನು ಈ ಸೌಲಭ್ಯವನ್ನು ಗರಿಷ್ಠ ಒಂದು ವರ್ಷದಿಂದ ಎರಡು ವರ್ಷಗಳಿಗೆ ಹೆಚ್ಚಿಸುವಂತೆ, ಇದೇ ರೀತಿಯ ಸೌಲಭ್ಯವನ್ನು ಔಪಚಾರಿಕ ಶಿಕ್ಷಣ (Formal Education) ಪಡೆಯಲು ಪ್ರಯತ್ನಿಸುವವರಿಗೂ ಎರಡು ವರ್ಷಗಳ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸುವಂತೆ ಹಾಗೂ ಈ ಹಿಂದೆ 2015ರಲ್ಲಿ ಹೊರಡಿಸಿರುವ ಆದೇಶದಲ್ಲಿ ಒಂದೇ ಪ್ರವರ್ಗದಲ್ಲಿ Composite grant-cum-loan ಆಡಿ ರೂ. 5 ಲಕ್ಷ ನಿಗದಿಪಡಿಸಿ ಆದೇಶಿಸಲಾಗಿದ್ದ ಪ್ರೋತ್ಸಾಹ ಧನವನ್ನು ಪ್ರಸ್ತುತ ಎ, ಬಿ & ಸಿ 03 ಶ್ರೇಣಿಗಳಲ್ಲಿ ಈ ಕೆಳಕಂಡಂತೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರವರ್ಗ-ಎʼರಲ್ಲಿ ರೂ. 10 ಲಕ್ಷ, ಪ್ರವರ್ಗ-ಬಿʼರಲ್ಲಿ ರೂ. 5 ಲಕ್ಷ, ಪ್ರವರ್ಗ-ಸಿʼರಲ್ಲಿ ರೂ. 2 ಲಕ್ಷ. ಈ ಮೇಲಿನ ಪ್ರಸ್ತಾವನೆಯಲ್ಲಿನ ವಿವರಿಸಿದ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಪರಿಷ್ಕೃತ ಆದೇಶವನ್ನು ಹೊರಡಿಸಲು ತೀರ್ಮಾನಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರಕಾರದ ಆದೇಶ ಸಂಖ್ಯೆ ಹೆಚ್‌ಡಿ 128 ಎಸ್‌.ಎಸ್‌ 2010 (ಪಿ-1), ದಿನಾಂಕ 19.01.2015 ರಲ್ಲಿನ ಯೋಜನೆಯನ್ನು ಉನ್ನತೀಕರಿಸಿ, ಶರಣಾಗತರಾಗುವ ನಕ್ಸಲರಿಗೆ/ಎಡಪಂಥೀಯ ಭಯೋತ್ಪಾದಕರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಈ ಕೆಳಗಿನಂತೆ ಮಾರ್ಪಾಡು ಮಾಡಲಾಗಿದೆ.

ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಆಕ್ಟ್-1908 ಮತ್ತು ಭಾರತ ಸರಕಾರದ ಯು.ಎ.ಪಿ. ಆಕ್ಟ್- 1967 ರಲ್ಲಿ ವಿವರಿಸಿರುವ ಭಯೋತ್ಪಾದಕರು/ತೀವ್ರಗಾಮಿಗಳು/ತೀವ್ರಗಾಮಿ ಚಟುವಟಿಕೆ/ತೀವ್ರಗಾಮಿ ಗುಂಪು/ ತೀವ್ರಗಾಮಿ ಸಂಘಟನೆಗಳ ವ್ಯಾಖ್ಯೆಯನ್ನೆ ಇಲ್ಲಿಯೂ ಅನ್ವಯಿಸಿಕೊಳ್ಳುವುದು.

ಯೋಜನೆಯು, ಕೇವಲ ತೀವ್ರಗಾಮಿಗಳು/ನಕ್ಸಲರು/ಎಡಪಂಥೀಯ ಭಯೋತ್ಪಾದಕರ ಬೆಂಬಲಿಗರು, ಎಡಪಂಥೀಯ ಸಂಘಟನೆಗಳಿಗೆ ಸಂಬಂಧಿಸಿದ ಕಾರ್ಯಕರ್ತರುಗಳಿಗೆ ಮಾತ್ರ ಅನ್ವಯಿಸುತ್ತದೆ. ಮೇಲೆ ಹೇಳಿದ ಚಟುವಟಿಕೆಗಳಲ್ಲಿ ಭಾಗಿಯಾದವರು ತಮ್ಮ ಬಳಿ ಇರುವ ಶಸ್ತ್ರಗಳ ಸಹಿತವಾಗಿ ಅಥವಾ ರಹಿತವಾಗಿ ಶರಣಾಗಬಹುದು. ಅಂತಹವರುಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

ಪ್ರವರ್ಗ-ಎ: ಸಂಘಟನೆಗಳ ಸದಸ್ಯರಾಗಿ ಗುರುತಿಸಿಕೊಂಡಿದ್ದು, ಭೂಗತರಾಗಿ ಶಸ್ತ್ರ ಸಜ್ಜಿತ ಗುಂಪಿನ ಸದಸ್ಯರಾಗಿದ್ದು, ಸೆಂಟ್ರಲ್ ಕಮಿಟಿ, ರೀಜನಲ್ ಕಮಿಟಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಏರಿಯಾ ಸಮಿತಿಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕಮಿಟಿಗಳ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತಹವರ ವಿರುದ್ಧ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹೊಂದಿರುವ ಜನಿಸಿದವರು/ಕರ್ನಾಟಕದಲ್ಲಿ ನಿವಾಸ ಹೊಂದಿರುವವರು. ಸ್ಥಳೀಯ, ಅಂದರೆ ಕರ್ನಾಟಕದಲ್ಲಿ ಜನಿಸಿರುವವರು ಅಥವಾ ರಾಜ್ಯದಲ್ಲಿ ನಿವಾಸ ಹೊಂದಿರುವವರು ಆಗಿರುತ್ತಾರೆ.

ಪ್ರವರ್ಗ-ಬಿ: ಸಂಘಟನೆಗಳ ಸದಸ್ಯರಾಗಿ ಗುರುತಿಸಿಕೊಂಡಿದ್ದು, ಭೂಗತರಾಗಿ ಶಸ್ತ್ರ ಸಜ್ಜಿತ ಗುಂಪಿನ ಸದಸ್ಯರಾಗಿದ್ದು, ಸೆಂಟ್ರಲ್ ಕಮಿಟಿ, ರೀಜನಲ್ ಕಮಿಟಿ, ರಾಜ್ಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಏರಿಯಾ ಸಮಿತಿಗಳಲ್ಲಿ ಯಾವುದಾದರೂ ಒಂದು ಅಥವಾ ಹೆಚ್ಚಿನ ಕಮಿಟಿಗಳ ಸದಸ್ಯರಾಗಿ ಸಕ್ರಿಯವಾಗಿರುವ ಮತ್ತು ಅಂತಹವರ ವಿರುದ್ದ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಕ್ರಿಮಿನಲ್ 3 ಮೊಕದ್ದಮೆಗಳನ್ನು ಹೊಂದಿರುವ ಪರಸ್ಥಳೀಯ ಅಂದರೆ ಕರ್ನಾಟಕದಲ್ಲಿ ಇರುವವರು/ಕರ್ನಾಟಕದಲ್ಲಿ ನಿವಾಸ ಹೊಂದದೇ ಇರುವವರು.

ಪ್ರವರ್ಗ-ಸಿ: ಎಡಪಂಥೀಯ ಭಯೋತ್ಪಾದನಾ ಸಂಘಟನೆಯ ಚಟುವಟಿಕೆಗಳನ್ನು ಬೆಂಬಲಿಸುವವರು, ಕೀಪರ್‌ಗಳು, ಕೊರಿಯರ್‌ಗಳು ಮಾಹಿತಿದಾರರುಗಳು ಮತ್ತು ಈ ಸಂಘಟನೆಗೆ ನೇಮಕಾತಿಗಳನ್ನು ಮಾಡುವಂತಹ ವ್ಯಕ್ತಿಗಳೊಂದಿಗೆ ಸಂಪರ್ಕವನ್ನು ಹೊಂದಿದವರಾಗಿದ್ದು ಮೇಲೆ ಹೇಳಿದ ಪ್ರವರ್ಗ-1 ಅಥವಾ ಪ್ರವರ್ಗ-2 ರ ಅಡಿಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳಲ್ಲಿ ತನ್ನ ವಿರುದ್ದ ದೋಷಾರೋಪಣಾ ಪತ್ರವನ್ನು ಹೊಂದಿರುವವರು. ಉಡುಪಿ ಎಸ್‌ಪಿ ಡಾ. ಅರುಣ್‌, ಎಎನ್‌ಎಫ್‌ ಎಸ್‌ಪಿ ಜಿತೇಂದ್ರ ಕುಮಾರ್‌ ದಯಾಮ ಪತ್ರಿಕಾಗೋಷ್ಠಿಯಲ್ಲಿದ್ದರು.







































































error: Content is protected !!
Scroll to Top