ಪುತ್ತೂರು : ಬಾಕಿಯಿರುವ ಸಾಲ ಮರುಪಾವತಿಗಾಗಿ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಜೀವ ಬೆದರಿಕೆಯೊಡ್ಡಿರುವ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ.
ಪುತ್ತೂರಿನ ತಿರುಮಲ ಹೊಂಡಾ ಮಾಲಕರ 2 ಕೋಟಿ ರೂ. ಸಾಲ ಬಾಕಿಯಾಗಿದ್ದು ಮರುಪಾವತಿಗಾಗಿ ಮನೆಗೆ ಹೋದಾಗ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪುತ್ತೂರು ಕೋರ್ಟ್ ರೋಡ್ ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರಿಲೇಷನ್ ಶಿಪ್ ಮ್ಯಾನೇಜರ್ ಚೈತನ್ಯ ಹೆಚ್.ಸಿ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬ್ಯಾಂಕ್‌ನಲ್ಲಿ ಪುತ್ತೂರಿನ ಬಲ್ನಾಡು ಗ್ರಾಮದ ಉಜಿರ್‌ಪಾದೆ ನಿವಾಸಿ ಕೀರ್ತಿ ಅಖಿಲೇಶ್ ಎಂಬವರು ರೂ. 2 ಕೋಟಿ ಸಾಲ ಮಾಡಿದ್ದು, ಆ ಸಾಲ ಮರುಪಾವತಿ ಮಾಡದೇ NPA ಆಗಿರುತ್ತದೆ. ಸಾಲ ಬಾಕಿಯ ಬಗ್ಗೆ ವಕೀಲರ ಮುಖಾಂತರ ಲೀಗಲ್ ನೋಟೀಸ್ ಕಳುಹಿಸಿದ್ದರೂ ಸಾಲ ಮರುಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ, ಸೆ. 25 ರಂದು ದೂರುದಾರ ಚೈತನ್ಯ ಅವರು ಸಹೋದ್ಯೋಗಿಗಳಾದ ಆಕಾಶ್ ಚಂದ್ರಬಾಬು ಮತ್ತು ದಿವ್ಯಶ್ರೀರವರೊಂದಿಗೆ ಕೀರ್ತಿ ಅಖಿಲೇಶ್ ಅವರ ಮನೆಗೆ ಹೋಗಿದ್ದಾರೆ. ಮನೆಯಲ್ಲಿದ್ದ ಅರುಣ ಕಿಶೋರ್ ಅವರನ್ನು ಮನೆ ಒಳಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಅಖಿಲೇಶ್ ರವರಿಗೆ ಕರೆ ಮಾಡಿ ವಿಚಾರ ತಿಳಿಸಿರುತ್ತಾರೆ. ಅಖಿಲೇಶ್ ಅವರು ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿಗೆ ಮನೆಗೆ ಬಂದಿರುವುದಕ್ಕೆ ಗದರಿಸಿರುವುದಲ್ಲದೇ, ತಂದೆ ಬರುವ ತನಕ ಕೂರುವಂತೆ ಮನೆಯ ಬಾಗಿಲು ಹಾಕಿ ಬಲವಂತವಾಗಿ ಕೂರಿಸಿರುತ್ತಾರೆ. ಕೃಷ್ಣ ಕಿಶೋರ್ ಅವರು ಮನೆಗೆ ಬಂದು ಬ್ಯಾಂಕ್‌ನವರು ಮನೆಗೆ ಬಂದ ಬಗ್ಗೆ ತಕರಾರು ತೆಗೆದು, ಗದರಿಸಿ ಪಿಸ್ತೂಲ್ ತೋರಿಸಿ ಶೂಟ್ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಚೈತನ್ಯ ನೀಡಿದ ದೂರಿನಂತೆ ಅಖಿಲೇಶ್ ಮತ್ತು ಕೃಷ್ಣ ಕಿಶೋರ್ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.































