ಕಾನೂನು ಕಣಜ : ಸಾಲದ ಮೇಲೆ ಮಿತಿಮೀರಿದ ಬಡ್ಡಿ ವಸೂಲಾತಿ

ಸಾರ್ವಜನಿಕ ಕ್ಷೇತ್ರದಲ್ಲಿ ವಾಣಿಜ್ಯ ವ್ಯವಹಾರವು ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಾದಂತೆ ಕೆಲವು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಹಣಕಾಸು ವ್ಯವಹಾರವನ್ನು ನಡೆಸಿ ತಾವು ನೀಡುವ ಸಾಲದ ಮೇಲೆ ಕಾನೂನು ಬಾಹಿರವಾಗಿ ಮತ್ತು ಬೇಕಾಬಿಟ್ಟಿಯಾಗಿ ಮಿತಿಮೀರಿದ ದರದ ಬಡ್ಡಿ ವಿಧಿಸಿ ಬಲಾತ್ಕಾರವಾಗಿ ಸಾಲ ವಸೂಲಿ
ಮಾಡುವ ದಂಧೆಯು ನಿರಂತರವಾಗಿ ಕಂಡು ಬರುತ್ತಿದೆ. ಸಾಲ ನೀಡುವ ವ್ಯಕ್ತಿ ಸಾಲ ಪಡಕೊಂಡವನಿಂದ ನಿರ್ದಿಷ್ಟ ಮತ್ತು ಕಾನೂನು ಬದ್ಧ ದರದ ಬಡ್ಡಿ ವಿಧಿಸಿ ವಸೂಲು ಮಾಡುವ ಕ್ರಮವು ಕಾನೂನು, ನೀತಿ ಮತ್ತು ಮಾನವೀಯತೆಯ ದೃಷ್ಟಿಯಿಂದ ನ್ಯಾಯೋಚಿತವಾಗಿರುತ್ತದೆ. ಆದರೆ ನೀಡಿರುವ ಸಾಲದ ಮೇಲೆ ಮಿತಿಮೀರಿದ ಬಡ್ಡಿ ವಿಧಿಸಿ ಸಾಲವನ್ನು ಕಾನೂನು ಬಾಹಿರವಾಗಿ ವಸೂಲು ಮಾಡುವ ಕ್ರಮವು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಕೆಲವು ತುರ್ತು ಸಂದರ್ಭಗಳಲ್ಲಿ ಸಮಾಜದ ಎಲ್ಲಾ ವರ್ಗದ ವ್ಯಕ್ತಿಗಳು ಅನಿವಾರ್ಯವಾಗಿ ಮಿತಿಮೀರಿದ ಬಡ್ಡಿ ವಿಧಿಸುವವರಿಂದ ಸಾಲ ಪಡೆಯುವ ಸಂದರ್ಭದಲ್ಲಿ ಸಹಿ ಮಾಡಿದ ಖಾಲಿ ಚೆಕ್‍ಗಳನ್ನು ಅಥವಾ ತಮ್ಮ ಆಸ್ತಿಗೆ
ಸಂಬಂಧಪಟ್ಟ ದಾಖಲೆಗಳನ್ನು ಸಾಲ ನೀಡುವವರಿಗೆ ನೀಡಿ ಆ ನಂತರ ಬಹಳ ಕಷ್ಟವನ್ನು ಅನುಭವಿಸುವ ಮತ್ತು ತಮ್ಮ ಮನೆ ಮಠಗಳನ್ನು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸಂಪಾದಿಸಿರುವ ಗೌರವ, ಮರ್ಯಾದೆಯನ್ನು ಕಳಕೊಂಡು ಶೋಷಣೆಗೆ ಒಳಗಾಗಿರುವ ಅನೇಕ ಪ್ರಸಂಗಗಳು ಸರ್ವೇಸಾಮಾನ್ಯವಾಗಿರುತ್ತದೆ. ಈ ರೀತಿಯ ಶೋಷಣೆಯಿಂದ ಮುಗ್ಧ ಜನರನ್ನು ರಕ್ಷಿಸುವ ಉದ್ದೇಶದಿಂದ ಮಿತಿಮೀರಿದ ಬಡ್ಡಿಯನ್ನು ವಿಧಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ “ಮಿತಿಮೀರಿದ ಬಡ್ಡಿ ವಿಧಿಸುವಿಕೆಯನ್ನು ನಿಷೇಧಿಸುವ ಕರ್ನಾಟಕ ಕಾಯ್ದೆ 2004” ಎಂಬ ಕಾನೂನನ್ನು ನಮ್ಮ ರಾಜ್ಯದಲ್ಲಿ ದಿನಾಂಕ 05.09.2003 ರಿಂದ ಪೂರ್ವಾನ್ವಯವಾಗುವಂತೆ 2004ರಲ್ಲಿ ಜಾರಿಗೆ ತರಲಾಗಿದೆ.
ಮಿತಿಮೀರಿದ ಬಡ್ಡಿಯೆಂದರೆ ಕರ್ನಾಟಕ ಲೇವಾದೇವಿ ಅಧಿನಿಯಯದ ಪ್ರಕಾರ ರಾಜ್ಯ ಸರ್ಕಾರವು ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಾಗಿರುವ ಬಡ್ಡಿಯಾಗಿರುತ್ತದೆ. ಈ ಕಾನೂನಿನ ಪ್ರಕಾರ ಸರಕಾರವು ನಿಗದಿಪಡಿಸಿದ ಬಡ್ಡಿಯ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ವಸೂಲು ಮಾಡುವ ಯಾವುದೇ ವ್ಯಕ್ತಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮಾತ್ರವಲ್ಲದೆ ಈ ರೀತಿಯ ಸಾಲ ಅಥವಾ ಅದರ ಮೇಲಿನ ಬಡ್ಡಿಯನ್ನು ವಸೂಲು ಮಾಡುವ ಸಲುವಾಗಿ ಸಾಲ ಪಡೆದಾತನಿಗೆ ಅಥವಾ ಆತನ ಮನೆಯವರಿಗೆ ಬೆದರಿಕೆ ಒಡ್ಡಿದರೆ, ಹಲ್ಲೆ ನಡೆಸಿದರೆ ಅಥವಾ ಯಾವುದೇ ರೀತಿಯ ಕಾನೂನು ಬಾಹಿರವಾದ ಕ್ರಮಕೈಗೊಂಡರೆ ಅಂತಹ ವ್ಯಕ್ತಿಯ ವಿರುದ್ಧ ಸಾಲ ಪಡೆದಾತ ಸರಕಾರದ ಪೋಲೀಸ್ ಮತ್ತಿತರ ಇಲಾಖೆಗಳಿಗೆ ದೂರನ್ನು ನೀಡಬಹುದಾಗಿದೆ. ಮೇಲ್ಕಾಣಿಸಿದ ಕಾನೂನನ್ನು ಉಲ್ಲಂಘಿಸಿ ಸಾಲ ಪಡಕೊಂಡ ವ್ಯಕ್ತಿಯನ್ನು ಪೀಡಿಸಿದರೆ ಅಥವಾ ತೊಂದರೆ ನೀಡಿದರೆ ಅಥವಾ ಈ ಕುರಿತು ದುಷ್ಪ್ರೇರಣೆ ನೀಡಿದರೆ ಅಂತಹ ವ್ಯಕ್ತಿಗೆ 3 ವರ್ಷಗಳ ತನಕದ ಜೈಲು ಶಿಕ್ಷೆ ಮತ್ತು ದಂಡನೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸಾಲ ಪಡಕೊಂಡವನು ಈ ಮೇಲ್ಕಾಣಿಸಿದಂತೆ ಅರ್ಜಿ ಸಲ್ಲಿಸಿದಾಗ, ಆತನಿಗೆ ಈ ಹಿಂದೆ ನೀಡಲಾಗಿದ್ದ ಸಾಲ ಅಥವಾ ಅದರ ಮೇಲಿನ ಬಡ್ಡಿ ಹಣದ ಮರುಪಾವತಿಗಾಗಿ ಅಥವಾ ಭದ್ರತೆಗಾಗಿ ಒತ್ತಾಯದಿಂದ ಅಥವಾ ಬಲತ್ಕಾರದಿಂದ ಆತನ ಚರ ಅಥವಾ ಸ್ಥಿರ ಸ್ವತ್ತನ್ನು ಅಥವಾ ಆಸ್ತಿಯನ್ನು ಸಾಲ ನೀಡಿರುವ ವ್ಯಕ್ತಿ ಈ ಮೊದಲೇ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದರೆ ನ್ಯಾಯಾಲಯವು ಅಂತಹ ಸ್ವತ್ತಿನ ಅಥವಾ ಆಸ್ತಿಯ ಸ್ವಾಧೀನವನ್ನು ಸಾಲ ಪಡಕೊಂಡಾತನಿಗೆ ವಾಪಸ್ಸು ಕೊಡಿಸುವ ಬಗ್ಗೆ ಸೂಕ್ತ ಆದೇಶ ನೀಡುವ ಅಧಿಕಾರ ಹೊಂದಿರುತ್ತದೆ. ಸಾಲ ಪಡಕೊಂಡ ವ್ಯಕ್ತಿ ಅಥವಾ ಆತನ ಕುಟುಂಬದ ಯಾವುದೇ ಸದಸ್ಯ ಸಾಲ ನೀಡಿದವನಿಂದ ಅಥವಾ ಆತನ ಜನರಿಂದ ಸಾಲ ವಸೂಲಾತಿ ಬಗ್ಗೆ ಬೆದರಿಕೆ, ಒತ್ತಾಯ, ಶೋಷಣೆ ಅಥವಾ ತೊಂದರೆಗಳಿಂದ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಇವೆಲ್ಲಕ್ಕೂ ಸಾಲ ನೀಡಿದ ವ್ಯಕ್ತಿಯೇ ಜವಾಬ್ದಾರಿಯಾಗುತ್ತಾನೆ ಮತ್ತು ಇಂತಹ ಸಂದರ್ಭದಲ್ಲಿ ಸಾಲ ಪಡಕೊಂಡವನ ಆತ್ಮಹತ್ಯೆಗೆ ತಾನು ಕಾರಣವಲ್ಲ ಎಂಬುದನ್ನು ಸಾಬೀತು ಪಡಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹೊಣೆಯು ಸಾಲ ನೀಡಿದಾತನ ಮೇಲೆ ಇರುತ್ತದೆ.































































error: Content is protected !!
Scroll to Top