ಉಡುಪಿ : ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ಉಡುಪಿ ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್ ಗುರುದೇವೋಭವ ಕಾರ್ಯಕ್ರಮ ನೆರವೇರಿತು.
ಗುರುವಂದನೆ
ಉಡುಪಿಯ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಡಾನಿಡಿಯೂರಿನ ದಿನಕರ್ ಶೆಟ್ಟಿ ಹಾಗೂ ಕುಂಬ್ರಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವೀಣಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನಿತ ದಿನಕರ ಶೆಟ್ಟಿ ಮಾತನಾಡಿ, ವ್ಯಕ್ತಿಗೆ ವ್ಯಕ್ತಿತ್ವವೇ ಭೂಷಣ. ಗುರುಗಳ ಮಾರ್ಗದರ್ಶನದಿಂದ ರೂಪಿತವಾದ ವ್ಯಕ್ತಿತ್ವ ದೇಶಕ್ಕೆ ಕೀರ್ತಿ ತರಬಲ್ಲದು. ಆದ್ದರಿಂದ ವಿದ್ಯಾರ್ಥಿಗಳು ಗುರುಹಿರಿಯರು ತಂದೆ-ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕೆಂದು ಎಂದರು. ವೀಣಾ ಅವರು ಮಾತನಾಡುತ್ತಾ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಸ್ಕಾರಯುತ ಶಿಕ್ಷಣ ಪ್ರಮುಖವಾದದ್ದು, ವಿದ್ಯಾರ್ಥಿಗಳು ಎಲ್ಲಾ ರೀತಿಯ ಕಲೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೆಂದು ಎಂದು ಕಿವಿಮಾತು ಹೇಳಿದರು.

ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಅಮೃತ ರೈ ಮಾತನಾಡಿ, ಶಿಕ್ಷಕರಿಗೆ ಗೌರವ ಸಲ್ಲಿಸುವುದು ಸನ್ಮಾನವಲ್ಲ. ಬದಲಾಗಿ ಅದು ದೇವರ ಪೂಜೆ. ಎಲ್ಲರ ಭವಿಷ್ಯ ರೂಪಿಸುವ ಗುರುಗಳಿಗೆ ಶಿರಬಾಗಿ ನಮಿಸಬೇಕು ಎಂದು ನುಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ರಿಯೇಟಿವ್ ಸಹ ಸಂಸ್ಥಾಪಕ ಡಾ. ಬಿ ಗಣನಾಥ್ ಶೆಟ್ಟಿ, ತಪ್ಪು ತಿದ್ದಿ ಜೀವನಪೂರ್ತಿ ವಿದ್ಯಾರ್ಥಿಗಳ ಏಳಿಗೆಗಾಗಿ ಬದುಕುವವರು ಶಿಕ್ಷಕರು. ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ನೈತಿಕತೆ ಉಳಿಸಿಕೊಂಡು ವೃತ್ತಿಯ ಘನತೆ ಹೆಚ್ಚಿಸಬೇಕು. ಶಿಕ್ಷಕರು ಅಧ್ಯಯನಶೀಲರಾಗಬೇಕಾದದ್ದು ಇಂದಿನ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತ್ರಿಶಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಜೋಯೆಲ್ ಮನೋಜ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು. ಆಡಳಿತ ಅಧಿಕಾರಿ ಜಯಪ್ರಕಾಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಲ ರಾಮಕೃಷ್ಣ ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ಯೋಗೀಶ್ ಮೊಗವೀರ ಕಾರ್ಯಕ್ರಮ ನಿರ್ವಹಿಸಿದರು.







































