ಅಜೆಕಾರು ಗುಡ್ಡೆಯಂಗಡಿಯಲ್ಲಿ ಬಾವಿ ಲೋಕಾರ್ಪಣೆ
ಅಜೆಕಾರು : ನನಗಲ್ಲ, ನಮಗೆ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿರುತ್ತೇವೆ. ನಾವು ನನಗಾಗಿ ಬದುಕುವುದಕ್ಕಿಂತ ನಮಗಾಗಿ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ಹಿನ್ನೆಲೆ ನಮಗೆ ಸಾಮಾಜಿಕ ತುಡಿತ ಇರುವುದು ಅಗತ್ಯ. ನಾವು ಸಂಪಾದಿಸಿದ ಸಂಪನ್ಮೂಲದಲ್ಲಿ ಸ್ವಲ್ಪವಾದರೂ ಸಮಾಜಕ್ಕೆ ಬೇಕಾದ ಶಾಶ್ವತ ಕೊಡುಗೆಗಳನ್ನು ನೀಡಿದಲ್ಲಿ ಪರಮಾತ್ಮನು ಸಂತೃಪ್ತನಾಗುವುದರಲ್ಲಿ ಸಂಶಯವಿಲ್ಲ ವಿದ್ವಾನ್ ವೇದಮೂರ್ತಿ ರಾಘವೇಂದ್ರ ಭಟ್ ಹೇಳಿದರು.
ಮರ್ಣೆ ಗ್ರಾಮ ಪಂಚಾಯತಿಗೆ ಸುಮಾರು 4 ಲಕ್ಷ ವೆಚ್ಚದಲ್ಲಿ ಗುಡ್ಡೆಅಂಗಡಿ ತನ್ನ ಹೆತ್ತವರಾದ ಶಾರದಾ ಮತ್ತು ಶ್ರೀಧರ ಭಟ್ ಸ್ಮರಣಾರ್ಥ ನಿರ್ಮಿಸಿದ ತೆರೆದ ಬಾವಿ ಹಾಗೂ ಕೊಳವೆಬಾವಿಯನ್ನು ಲೋಕಾರ್ಪಣೆಗೈದು ಮಾತನಾಡಿದರು.
ಆರೋಗ್ಯಕರ ನೀರನ್ನು ಕಾಪಾಡಿಕೊಳ್ಳುವುದು ಮಾನವ ಜೀವನಕ್ಕೆ ಅಗತ್ಯವಾಗಿದೆ. ಜನರು ಶುದ್ಧ ನೀರನ್ನು ಕುಡಿಯಲು ಸಾಧ್ಯವಾಗದಿದ್ದಾಗ, ಅದು ದೇಹದ ಮೇಲೆ ತಕ್ಷಣದ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಎಂದು ಹೇಳಿದರು.
ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್ ಮಾತನಾಡಿ, ಅಂತರ್ಜಲ ಕುಸಿಯುತ್ತಿರುವ ಕಾರಣ ಬೇಸಿಗೆಯಲ್ಲಿ ನೀರನ್ನು ಮಿತವಾಗಿ ಬಳಸಿ, ಅಲ್ಲದೆ ಯಾವುದೇ ಪ್ರಚಾರ ಬಯಸದೆ ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿದ್ವಾನ್ ರಾಘವೇಂದ್ರ ಭಟ್ಟರು ಮಾದರಿ ಎಂದರು. ಗ್ರಾಮ ಪಂಚಾಯತ್ ವತಿಯಿಂದ ಗಾಘವೇಂದ್ರ ಭಟ್ ಅವರನ್ನು ಸನ್ಮಾನಿಸಲಾಯಿತು.
ತಾ.ಪಂ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಪ್ರಮುಖರಾದ ನಂದ ಕುಮಾರ್ ಹೆಗ್ಡೆ , ಹಿಂದೂ ಸಮಾಜದ ಮುಖಂಡ ರತ್ನಾಕರ ಅಮೀನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ಅರುಂಧತಿ, ಜಗನ್ನಾಥ ಶೆಟ್ಟಿ, ಗ್ರಾಮ ಪಂಚಾಯತ್ ಸಿಬ್ಬಂದಿ, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಂದ ಕುಮಾರ್ ಹೆಗ್ಡೆ ನಿರೂಪಿಸಿ ವಂದಿಸಿದರು.







































