ಜ್ವರ ಒಂದು ಕಾಯಿಲೆಯಾಗಿರಬಹುದು ಅಥವಾ ಬೇರೆ ರೋಗದ ಲಕ್ಷಣ ಆಗಿರಬಹುದು. ಅದನ್ನು ಪರಿಶೀಲಿಸಿ ಡಾಕ್ಟರ್ ಮದ್ದನ್ನು ನೀಡುತ್ತಾರೆ. ಇಲ್ಲಿ ಸಾಮಾನ್ಯ ಜ್ವರ ಬಂದಾಗ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದುಕೊಳ್ಳೋಣ.
ಜ್ವರ ಎಂದರೆ ಶರೀರದ ತಾಪಮಾನ ಹೆಚ್ಚಾಗುವುದು. ಜ್ವರವಿದ್ದಾಗ ಶರೀರದ ಅಂಗಾಂಗಗಳಲ್ಲಿ ನೋವು, ದುರ್ಬಲತೆ, ಬಾಯಿ ರುಚಿ ಹೋಗುವುದು ಸಾಮಾನ್ಯ. ಸಂದುಗಳಲ್ಲಿ ನೋವು, ನಿರುತ್ಸಾಹ ಮತ್ತು ಅಜೀರ್ಣವಾಗುವುದು.
ಜ್ವರ ಬಂದಾಗ ಏನು ಮಾಡಬಾರದು
ಸ್ನಾನ ಮಾಡಬಾರದು. ಇದು ಜ್ವರವನ್ನು ಉಲ್ಬಣಗೊಳಿಸುತ್ತದೆ.
ವ್ಯಾಯಾಮ ಮಾಡಬಾರದು. ಇದರಿಂದ ಶರೀರದ ಬಲ ಇನ್ನಷ್ಟು ಕಡಿಮೆಯಾಗುತ್ತದೆ.
ಹಗಲಿನಲ್ಲಿ ನಿದ್ದೆ ಮಾಡಬಾರದು. ಇದರಿಂದ ಅಜೀರ್ಣ ಉಂಟಾಗುತ್ತದೆ.
ಗುರು ಆಹಾರವನ್ನು ಸೇವಿಸಬಾರದು. ಜೀರ್ಣಶಕ್ತಿ ಕಮ್ಮಿ ಇರುವುದರಿಂದ ಉಪವಾಸ ಮಾಡಿದರೆ ಒಳ್ಳೆಯದು. ಇಲ್ಲದಿದ್ದರೆ ಬಿಸಿಯಾದ ಗಂಜಿ, ದ್ರವ ಆಹಾರ ಸೇವಿಸಿ.
ತಣ್ಣೀರು, ಕರಿದ ಪದಾರ್ಥ, ಖಾರ, ಸಿಹಿ ಪದಾರ್ಥ ವರ್ಜ್ಯ.
ಗಾಳಿಗೆ ಅಡ್ಡಾಡಬೇಡಿ. ಇದು ದೋಷಗಳನ್ನು ಅಸಮತೋಲನಗೊಳಿಸುತ್ತದೆ.
ಏನು ಸೇವಿಸಬೇಕು
ಬಿಸಿನೀರನ್ನು ಅವಾಗವಾಗ ಸೇವಿಸಿ.
ಷಡಂಗಪಾನೀಯ- (ಜೆಕಿನಗೆಡ್ಡೆ, ಪರ್ಪಟ, ಲಾವಂಚ, ರಕ್ತ ಚಂದನ, ಶುಂಠಿ, ಸುಗಂದಬಾಲಾ) ಒಂದು ಚಮಚ ಚೂರ್ಣ ಐದು ಲೋಟ ನೀರಿಗೆ ಹಾಕಿ ನಾಲ್ಕು ಲೋಟ ಬರುವವರೆಗೆ ಕುದಿಸಿ ಸೋಸಿ ಇಡಿರಿ. ಈ ನೀರನ್ನು ದಿನವಿಡಿ ಕುಡಿಯಿರಿ.
ಅನ್ನ ಬೇಯಿಸಿದ ನೀರು ಶುಂಠಿ ಬೆರೆಸಿ ನೀಡಿ.
ಹೆಸರುಬೇಳೆ ಸೂಪ್ ಮಾಡಿ ಸೇವಿಸಿ. ಬಾರ್ಲಿ ನೀರು, ಸಾಬುದಾನದ ನೀರು ಸೇವಿಸಬಹುದು.
ನೆನೆಸಿದ ಒಣದ್ರಾಕ್ಷಿ ಸೇವಿಸಬಹುದು.
ಹಣ್ಣುಗಳಲ್ಲಿ ದಾಳಿಂಬೆ, ಕಿತ್ತಳೆ, ಮೋಸಂಬಿ ಸೇವಿಸಬಹುದು.
ತರಕಾರಿಗಳಲ್ಲಿ ಪಡವಳಕಾಯಿ, ಹಾಗಲಕಾಯಿ, ತರಕಾರಿ ಸೂಪ್ ಕೂಡ ಮಾಡಿ ಸೇವಿಸಬಹುದು.
ಒಂದು ಗ್ಲಾಸ್ ನೀರಿನಲ್ಲಿ ನಾಲ್ಕು ಐದು ತುಳಸಿ ಎಲೆಯನ್ನು ಹಾಕಿ ನಾಲ್ಕು ಗಂಟೆ ನೆನೆಸಿ ನಂತರ ಸೇವಿಸಿ.
ಒಂದು ಗ್ಲಾಸ್ ನೀರಿನಲ್ಲಿ ಅರ್ಧ ಚಮಚ ಕೊತ್ತಂಬರಿ ಅರ್ಧ ಚಮಚ ಜೀರಿಗೆ ಹಾಕಿ ನೆನೆಸಿ 2 ಗಂಟೆಯ ನಂತರ ಸೇವಿಸಬಹುದು.
ಜ್ವರದಲ್ಲಿ ಮುಖ್ಯವಾಗಿ ಬೇಕಾಗಿರುವುದು ವಿಶ್ರಾಂತಿ.

ಆಯುರ್ವೇದ ಮದ್ದುಗಳು- ತ್ರಿಭುವನಕೀರ್ತಿ ರಸ, ಅಮೃತ ಸತ್ವ, ಮೃತ್ಯುಂಜಯ ರಸ ಮುಂತಾದವುಗಳು.






































