ಹೊಸದಿಲ್ಲಿ : ಸಂಸದ ಅಸಾದುದ್ದೀನ್ ಓವೈಸಿಯವರ ದಿಲ್ಲಿ ನಿವಾಸದ ನಾಮಫಲಕಕ್ಕೆ ಕಿಡಿಗೇಡಿಗಳು ನಿನ್ನೆ ರಾತ್ರಿ ಮಸಿ ಬಳಿದಿದ್ದಾರೆ. ಈ ಕುರಿತು ಒವೈಸಿಯೇ ಟ್ವಿಟ್ಟರ್‌ನಲ್ಲಿ
ಮಾಹಿತಿ ನಿಡಿದ್ದಾರೆ. ಗುರುವಾರ ರಾತ್ರಿ ಕೆಲವು ಕೆಲವು ದುಷ್ಕರ್ಮಿಗಳು ನನ್ನ ಮನೆ ಮೇಲೆ ಮಸಿ ಎರಚಿದ್ದಾರೆ. ದಿಲ್ಲಿಯಲ್ಲಿರುವ ನನ್ನ ಮನೆಯನ್ನು ಆಗಾಗ ಟಾರ್ಗೆಟ್ ಮಾಡಲಾಗುತ್ತಿದೆ. ಈ ಬಗ್ಗೆ ದಿಲ್ಲಿ ಪೊಲೀಸ್ ಅಧಿಕಾರಿಗಳನ್ನು ಕೇಳಿದರೆ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ ಎಂದಿದ್ದಾರೆ.
ಎಕ್ಸ್ ಪೋಸ್ಟ್‌ಗೆ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿರುವ ಓವೈಸಿ ಗೃಹ ಸಚಿವರ ಮೇಲ್ವಿಚಾರಣೆಯಲ್ಲಿ ಇದೆಲ್ಲ ನಡೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಓಂ ಬಿರ್ಲಾ ಅವರನ್ನು ಟ್ಯಾಗ್ ಮಾಡಿ ಸಂಸದರ ಸುರಕ್ಷತೆಯ ಭರವಸೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ದಯವಿಟ್ಟು ನಮಗೆ ತಿಳಿಸಿ ಎಂದಿದ್ದಾರೆ.
ನನ್ನ ಮನೆಯನ್ನು ಗುರಿಯಾಗಿಸುವ ಸಣ್ಣಪುಟ್ಟ ಗೂಂಡಾಗಳಿಗೆ ನಾನು ಹೆದರುವುದಿಲ್ಲ. ಸಾವರ್ಕರ್ ಮಾದರಿಯ ಈ ಹೇಡಿತನದ ಕೃತ್ಯವನ್ನು ನಿಲ್ಲಿಸಿ. ಮಸಿ ಎರಚಿದ ನಂತರ ಅಥವಾ ಕಲ್ಲು ತೂರಾಟ ಮಾಡಿದ ನಂತರ ಓಡಿಹೋಗಬೇಡಿ. ನನ್ನನ್ನು ಎದುರಿಸಲು ಧೈರ್ಯ ಮಾಡಿ. ನಾನು ಯಾವುದಕ್ಕೂ ಹೆದರಲ್ಲ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದು ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಹಲವು ಬಿಜೆಪಿ ನಾಯಕರು ಓವೈಸಿ ವಿರುದ್ಧ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಮಸಿ ಬಳಿದಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ದಿಲ್ಲಿಯ ಅಶೋಕ ರಸ್ತೆಯ ಬಳಿ ಇರುವ ಓವೈಸಿ ಮನೆ ಮೇಲೆ ಈ ಹಿಂದೆಯೂ ಹಲವು ಬಾರಿ ದಾಳಿ ನಡೆದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರ ನಿವಾಸದ ಮೇಲೆ ಕೆಲವರು ಕಲ್ಲು ತೂರಾಟ ನಡೆಸಿದ್ದರು. 2022ರಲ್ಲಿ ಉತ್ತರ ಪ್ರದೇಶದಲ್ಲಿ ಅವರ ಬೆಂಗಾವಲು ಪಡೆ ಮೇಲೆ ಗುಂಡು ಹಾರಿಸಲಾಗಿತ್ತು.
ಸಂಸದ ಒವೈಸಿ ಮನೆ ನಾಮಫಲಕಕ್ಕೆ ಮಸಿ ಬಳಿದ ಕಿಡಿಗೇಡಿಗಳು





































