ಕಾರ್ಕಳ : ಬಾಡಿಗೆ ಮನೆಯಲ್ಲಿ ವಾಸವಾಗಿರುವ ಮಹಿಳೆಗೆ ಮನೆ ಖಾಲಿ ಮಾಡುವಂತೆ ತಂಡವೊಂದು ಬೆದರಿಕೆಯೊಡ್ಡಿರುವ ಘಟನೆ ಜೂ. 15ರಂದು ಕಾರ್ಕಳದಲ್ಲಿ ಸಂಭವಿಸಿದೆ.
ಶೋಭಾ ಎಂಬವರು ಪೆರ್ವಾಜೆ ಭಾರತ್ ಬೀಡಿ ಕಂಪೌಂಡ್‌ನಲ್ಲಿ ಬಾಡಿಗೆ ಹಕ್ಕಿನ ಮನೆಯಲ್ಲಿ ವಾಸವಾಗಿರುತ್ತಾರೆ. ಜೂ. 15 ರಂದು ಮಂಗಳೂರಿನ ಬಿ. ಆನಂದ ಜಿ., ಕಾರ್ಕಳದ ಶ್ರೀನಿವಾಸ ಮತ್ತು ಮಲ್ಲಿಕಾರ್ಜುನ್ ಎಂಬವರು ಬಾಡಿಗೆ ಹಕ್ಕಿನ ವಿಚಾರವಾಗಿ ಶೋಭಾ ಅವರಿಗೆ ಬೆದರಿಕೆಯೊಡ್ಡಿದ್ದಾರೆ. ಆರೋಪಿತರು ಬಾಡಿಗೆ ಮನೆಯ ಸಮೀಪ ಬಂದು ಶೋಭಾ ಅವರು ಮನೆಯಿಂದ ಹೊರಗಡೆ ಹೋಗದಂತೆ ಅಕ್ರಮವಾಗಿ ತಡೆದು ನಿಲ್ಲಿಸಿ, ಬಲತ್ಕಾರದಲ್ಲಿ ಮನೆಯ ಸಾಮಾನುಗಳನ್ನು ಖಾಲಿ ಮಾಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭ ಶೋಭಾ ಅವರ ಸಹೋದರ ಅನಂತಕೃಷ್ಣ ಘಟನಾ ಸ್ಥಳಕ್ಕೆ ಬಂದಿದ್ದು, ಅವರನ್ನೂ ತಡೆದು ನಿಲ್ಲಿಸಿ ಮನೆ ಖಾಲಿ ಮಾಡದಿದ್ದರೆ ಹೆಚ್ಚು ಜನರನ್ನು ಕರೆದುಕೊಂಡು ಬಂದು ಮನೆಯಿಂದ ಹೊರಗಡೆ ಹಾಕುವುದಾಗಿ, ಅಲ್ಲದೆ ಕೈ ಕಾಲು ಮುರಿದು ಹಾಕುವುದಾಗಿ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನೆ ಖಾಲಿ ಮಾಡುವಂತೆ ತಂಡದಿಂದ ಮಹಿಳೆಗೆ ಬೆದರಿಕೆ


































