ಬಕ್ರೀದ್ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಚನೆ
ಉಡುಪಿ : ಬಕ್ರೀದ್ ಹಬ್ಬದ ಆಚರಣೆಯ ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಣಿಕೆ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಉಡುಪಿ ಜಿಲ್ಲಾಧಿಕಾರಿ ಡಾ ಕೆ. ವಿದ್ಯಾಕುಮಾರಿ ಎಚ್ಚರಿಕೆ ನೀಡಿದ್ದಾರೆ.
ಅನಧಿಕೃತವಾಗಿ ಜಾನುವಾರುಗಳ ವಧೆ ಹಾಗೂ ಸಾಗಾಟ ಕಂಡುಬಂದರೆ ಹತ್ತಿರದ ಪೋಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಜಾನುವಾರು ಸಾಗಾಟ ಮಾಡಲು ಪಶುಸಂಗೋಪನ ಇಲಾಖೆ ನಿಗದಿಪಡಿಸಿದ ನಮೂನೆಯಲ್ಲಿ ಅನುಮತಿ ಹಾಗೂ ಪೋಲಿಸ್ ಅನುಮತಿ ಪಡೆಯುವುದು ಕಡ್ಡಾಯ ಎಂದರು.
ಬಕ್ರೀದ್ ಹಬ್ಬ ಶಾಂತಿ ಮತ್ತು ಸೌಹಾರ್ದಯುತವಾಗಿ ನಡೆಯಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರ್‌ಗಳು ಶಾಂತಿ ಸಭೆಗಳನ್ನು ನಡೆಸಬೇಕು. ಜೊತೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ನಗರ ಸ್ಥಳೀಯ ಸಂಸ್ಥೆ, ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ತಪಾಸಣೆ ವೇಳೆ ವಶಪಡಿಸಿಕೊಂಡ ಅನಧಿಕೃತ ಜಾನುವಾರುಗಳನ್ನು ಸಂರಕ್ಷಿಸಿ, ಹತ್ತಿರದ ಗೋಶಾಲೆಗೆ ಬಿಡಲು ಸಮೀಪದ ಗೋಶಾಲೆಗಳನ್ನು ಗುರುತಿಸಬೇಕು. ವಶಕ್ಕೆ ಪಡೆದ ಜಾನುವಾರುಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡಲು ಪಶುವೈದ್ಯಾಧಿಕಾರಿಗಳು ಕೂಡ ಸನ್ನದ್ಧರಾಗಿರಬೇಕು. ಜಾನುವಾರುಗಳಿಗೆ ಅಗತ್ಯವಿರುವ ಮೇವು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚಿಸಿದರು.


































