ಪಿಒಕೆ ನಮ್ಮದಲ್ಲ : ಕೋರ್ಟ್‌ಗೆ ಪಾಕಿಸ್ಥಾನ ಅಚ್ಚರಿಯ ಹೇಳಿಕೆ

ಇಸ್ಲಾಮಾಬಾದ್‌: ಈ ಬಾರಿ ನಾವು ಗೆದ್ದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗುವುದು ಎಂದು ಕೆಲದಿನಗಳ ಹಿಂದೆಯಷ್ಟೇ ಬಿಜೆಪಿ ಹೇಳಿತ್ತು. ಈಗ ಇದಕ್ಕೆ ಪೂರಕ ಎನ್ನುವಂತೆ ಆಜಾದ್‌ ಕಾಶ್ಮೀರ ನಮ್ಮದಲ್ಲ ಎಂದು ಸ್ವತಹ ಪಾಕಿಸ್ಥಾನವೇ ಹೇಳಿಕೊಂಡಿದೆ. ಪಿಒಕೆ ವಿದೇಶಿ ಸರಹದ್ದು, ಅಲ್ಲಿ ನಮ್ಮ ಕಾನೂನು ನಡೆಯುವುದಿಲ್ಲ ಎಂದು ಪಾಕಿಸ್ಥಾನ ಸರ್ಕಾರ ಇಸ್ಲಾಮಾಬಾದ್‌ ಹೈಕೋರ್ಟ್‌ಗೆ ಅಚ್ಚರಿಯ ಮಾಹಿತಿ ಸಲ್ಲಿಸಿದೆ.

ಕಾಶ್ಮೀರಿ ಕವಿ ಅಹ್ಮದ್ ಫರ್ಹಾದ್‌ ಶಾ ನಿಗೂಢ ನಾಪತ್ತೆ ಹಿನ್ನೆಲೆಯಲ್ಲಿ ಅವರ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ಗೆ ಮಾಹಿತಿ ನೀಡಿದ ಪಾಕಿಸ್ಥಾನದ ಹೆಚ್ಚುವರಿ ಅಟಾರ್ನಿ ಜನರಲ್‌, ‘ಆಜಾದ್‌ ಕಾಶ್ಮೀರದಲ್ಲಿ ಅಹ್ಮದ್‌ ಶಾ ಇರುವ ಕಾರಣ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಿಲ್ಲ. ಅದು ವಿದೇಶಿ ಸರಹದ್ದು. ಅಲ್ಲಿಗೆ ಪ್ರತ್ಯೇಕ ಸಂವಿಧಾನ, ನ್ಯಾಯಾಲಯಗಳಿವೆ. ಅಲ್ಲಿನ ಕೋರ್ಟ್‌ಗಳು ನೀಡಿದ ತೀರ್ಪನ್ನು ವಿದೇಶಿ ನ್ಯಾಯಾಲಯದ ತೀರ್ಪುಗಳ ರೀತಿ ಪರಿಗಣಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ನ್ಯಾಯಾಧೀಶ ಕಯಾನಿ ಅವರು, ‘ಅದು ವಿದೇಶಿ ನೆಲವೆಂದಾದಲ್ಲಿ ಪಾಕಿಸ್ಥಾನ ಸೇನೆ ಆ ಪ್ರದೇಶಕ್ಕೆ ಪ್ರವೇಶ ಮಾಡಿದ್ದು ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ರಾವಲ್ಪಿಂಡಿಯಿಂದ ಅಪಹರಣಕ್ಕೀಡಾದ ಅಹ್ಮದ್‌ ಫ‌ಹಾದ್‌ ಶಾ ಅವರ ಪ್ರಕರಣದ ವಿಚಾರಣೆ ವೇಳೆ ಪಾಕ್‌ ಸರಕಾರದ ಪರ ಹಾಜರಿದ್ದ ಹೆಚ್ಚುವರಿ ಅಟಾರ್ನಿ ಜನರಲ್‌ ಅವರು, ಪಿಒಕೆ ನಮ್ಮ ಆಡಳಿತದ ಪರಿಧಿಯಲ್ಲಿಲ್ಲ. ನಮ್ಮ ಕಾನೂನು ಅಲ್ಲಿ ಅನ್ವಯವಾಗುವುದಿಲ್ಲ’ ಎಂದಿದ್ದಾರೆ. ಫ‌ಹಾದ್‌ ಅವರು ಪಿಒಕೆ ಪೊಲೀಸರ ವಶದಲ್ಲಿದ್ದು, ಅದು ವಿದೇಶಿ ನೆಲವಾದ ಕಾರಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.
ಮೇ 15ರಂದು ಫ‌ಹಾದ್‌ ಅವರನ್ನು ಅಪಹರಿಸಲಾಗಿದೆ ಎಂದು ಪಾಕ್‌ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಅವರು ಪಿಒಕೆಯಲ್ಲಿಲ್ಲ. ಸರಕಾರ ಸುಳ್ಳು ಹೇಳುತ್ತಿದೆ ಎಂದು ಅವರ ಕುಟುಂಬ ಆರೋಪಿಸಿದೆ.











































































error: Content is protected !!
Scroll to Top