ಸತತ ಮೂರನೇ ಬಾರಿಗೆ ಬಿಜೆಪಿಗೆ ಅಧಿಕಾರ ಖಚಿತ
ಹೊಸದಿಲ್ಲಿ : ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವುದು ಬಹುತೇಕ ಖಚಿತ ಎಂದು ಶನಿವಾರ 7ನೇ ಹಂತದ ಚುನಾವಣೆ ಮುಗಿದ ಬೆನ್ನಿಗೆ ಪ್ರಕಟಗೊಂಡಿರುವ ಅಷ್ಟೂ ಸಮೀಕ್ಷೆಗಳು ಸಾರಿವೆ. ಜನರಿಗೂ ನರೇಂದ್ರ ಮೋದಿ ಮರಳಿ ಪ್ರಧಾನಿಯಾಗುವ ವಿಶ್ವಾಸವಿತ್ತು. ಆದರೆ ಈ ಸಮೀಕ್ಷೆಗಳ ಮೇಲೆ ಇದ್ದ ಕುತೂಹಲ ಏನೆಂದರೆ ಬಿಜೆಪಿಯ 400ರ ಗುರಿ ಈಡೇರುವುದೇ ಎನ್ನುವುದು. ಲೋಕಸಭೆ ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಬಿಜೆಪಿ ಈ ಸಲ ನಮ್ಮ ಗುರಿ 400ರ ಗಡಿ ದಾಟುವುದು ಎಂದು ಘೋಷಿಸಿತ್ತು. ಅಂತೆಯೇ ಚುನಾವಣೆಗೂ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂಬ ಘೋಷಾವಾಕ್ಯವನ್ನು ಟಂಕಿಸಿತ್ತು.
ಆದರೆ ಹೆಚ್ಚಿನ ಸಮೀಕ್ಷೆಗಳು 400ರ ಗಡಿ ದಾಟುವುದು ಅಷ್ಟು ಸುಲಭವಲ್ಲ ಎಂದು ಹೇಳುತ್ತಿವೆ. ಹೆಚ್ಚಿನೆಲ್ಲ ಸಮೀಕ್ಷೆಗಳು ಎನ್ಡಿಎಗೆ
350ಕ್ಕೆ ಮೇಲ್ಪಟ್ಟ ಸ್ಥಾಣಗಳನ್ನು ನೀಡಿವೆ. ಐದು ಸಮೀಕ್ಷೆಗಳು ಮಾತ್ರ 400ರ ಗಡಿ ತಲುಪಬಹುದು ಎಂದು ಹೇಳಿವೆ. ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಮತ್ತು ಚಾಣಕ್ಯ ನಡೆಸಿದ ಸಮೀಕ್ಷೆ ಪ್ರಕಾರ ಎನ್ಡಿಎ 400ರ ಗಟಿ ದಾಟಲಿದೆ. ಸಿಎನ್ಎಕ್ಸ್ ಸೇರಿ ಇನ್ನೂ ಎರಡು ಸಮೀಕ್ಷೆಗಳು ಎನ್ಡಿಎಯನ್ನು 400ರ ಗಡಿ ದಾಟಿಸಿವೆ. ಅದರಲ್ಲೂ ಚಾಣಕ್ಯ ಎನ್ಡಿಎಗೆ 425 ಸೀಟುಗಳು ಬರಬಹುದು ಎಂದು ಅಂದಾಜಿಸಿದ್ದು, ಇದು ಎಲ್ಲ ಸಮೀಕ್ಷೆಗಳಿಗಿಂತ ಗರಿಷ್ಠವಾಗಿದೆ. ಗಮನಾರ್ಹ ಅಂಶವೆಂದರೆ ಯಾವ ಸಮೀಕ್ಷೆಯೂ ಎನ್ಡಿಎಗೆ 350ಕ್ಕಿಂತ ಕಡಿಮೆ ಸ್ಥಾನವನ್ನು ನೀಡಿಲ್ಲ. ಇದರ ಅರ್ಥ 2019ಕ್ಕಿಂತಲೂ ಬಲಿಷ್ಠವಾಗಿ ಎನ್ಡಿಎ ಮೈತ್ರಿಕೂಟ ಹೊರಹೊಮ್ಮಲಿದೆ ಎನ್ನುವುದು.
ಪ್ರಬಲವಾದ ಹಿಂದುತ್ವದ ಪ್ರತಿಪಾದನೆ ಜತೆಗೆ ಜನಕಲ್ಯಾಣ ಯೋಜನೆಗಳು, ಭ್ರಷ್ಟಾಚಾರ ರಹಿತ ಆಡಳಿತ ಹಾಗೂ ಮೋದಿಯ ಸಮರ್ಥ ನಾಯಕತ್ವ ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರಿಯಲು ಕಾರಣ ಎನ್ನಲಾಗುತ್ತಿದೆ.
ಎಲ್ಲ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿ ಮೈತ್ರಿಕೂಟಕ್ಕೆ 160ರೊಳಗಿನ ಸ್ಥಾನಗಳು ಲಭಿಸಿವೆ. ಕಾಂಗ್ರೆಸ್ ತುಸು ಚೇತರಿಸಿಕೊಂಡು 60-65 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ಅಂದಾಜಿಸಿವೆ.






































