ದೇಹವನ್ನು ತಂಪುಮಾಡುವ ಪದಾರ್ಥಗಳು

ಬೇಸಿಗೆಯಲ್ಲಿ ಪಿತ್ತದೋಷವು ಪ್ರಕುಪಿತವಾಗಿರುವುದರಿಂದ ದೇಹವನ್ನು ತಂಪು ಮಾಡುವುದು ಬಹಳ ಮುಖ್ಯ. ದೇಹವನ್ನು ತಂಪಾಗಿರಿಸಲು ನಮ್ಮ ಆಹಾರ ವಿಹಾರ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯದಾಯಕ, ನೈಸರ್ಗಿಕವಾಗಿ ದೊರೆಯುವ ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳನ್ನು ಬಳಸಿರಿ. ಬೇಸಿಗೆಯಲ್ಲಿ ಸೇವಿಸುವಂತಹ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

ಸೋಂಪು – ಯಾವುದೇ ಹೊಟೇಲ್‌ನಲ್ಲಿ ಇರಬಹುದು ಊಟವಾದ ನಂತರ ಬಿಲ್ ತರುವಾಗ ಸೋಂಪನ್ನು ಜೊತೆಗೆ ತರುವುದು ನಾವು ಕಂಡಿದ್ದೇವೆ. ಇದು ತಿಂದ ಆಹಾರವನ್ನು ಜೀರ್ಣ ಮಾಡುವುದಲ್ಲದೆ ಬಾಯಿಯ ದುರ್ಗಂಧವನ್ನು ಹೋಗಲಾಡಿಸುತ್ತದೆ. ಬೇಸಿಗೆಯಲ್ಲಿ ಜೀರ್ಣಶಕ್ತಿ ಕಡಿಮೆ ಇರುವುದರಿಂದ ನಾವು ಸೇವಿಸುವ ಆಹಾರದಲ್ಲಿ ಜೀರ್ಣಕಾರಕ ಅಂಶ ಇರೋದು ಬಹಳ ಮುಖ್ಯ. ಸ್ವಲ್ಪ ಸೋಂಪನ್ನು ಜಗಿಯುವುದರಿಂದ ಅಥವಾ ಸೋಂಪಿನ ನೀರು ಕುಡಿಯುವುದರಿಂದ ದೇಹವು ತಂಪಾಗುತ್ತದೆ. ಎರಡು ಕಪ್ ಕುದಿಯುವ ನೀರಿನಲ್ಲಿ ಒಂದು ಚಮಚ ಸೋಂಪನ್ನು ಹಾಕಿ ಸರಿಯಾಗಿ ಕುದಿಸಿರಿ. ತಣ್ಣಗಾದ ನಂತರ ಸೋಸಿ ಕುಡಿಯಿರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಅಡುಗೆ ಪದಾರ್ಥಗಳಲ್ಲಿಯೂ ಕೂಡ ಬಳಸಬಹುದು.

    ಸೋಂಪಿನ ಉಪಯೋಗಗಳು
    ಇದು ಜೀರ್ಣಕಾರಕ, ದೇಹವನ್ನು ತಂಪು ಮಾಡುವುದರ ಜೊತೆಗೆ ಅತ್ಯಧಿಕ ಬಾಯಾರಿಕೆಯನ್ನು ಕಡಿಮೆಗಳಿಸುವುದು. ಗ್ಯಾಸ್ಟ್ರಿಕ್ ಸಮಸ್ಯೆ, ಎದೆ ಉರಿ, ಆ್ಯಸಿಡಿಟಿ, ಶ್ವಾಸ ಕೋಶದ ತೊಂದರೆಗಳನ್ನು ನಿವಾರಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ, ಕಣ್ಣಿನ ದೃಷ್ಟಿ ದೋಷವನ್ನು ಸರಿಪಡಿಸುತ್ತದೆ. ಬಾಯಿಯ ದುರ್ಗಂಧವನ್ನು ನಿವಾರಿಸುತ್ತದೆ.

    ಕೊತ್ತಂಬರಿ ಬೀಜ ಹಾಗೂ ಸೊಪ್ಪು – ತ್ರಿದೋಷಜವನ್ನು ಸಮತೋಲನದಲ್ಲಿ ಇಡುವ ಈ ಕೊತ್ತಂಬರಿ ಬೀಜ ಅಥವಾ ಸೊಪ್ಪು ಬೇಸಿಗೆಯಲ್ಲಿ ಸೇವಿಸುವುದು ಹಿತಕರ. ಇದು ಜೀರ್ಣಕಾರಕ, ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ, ಹೃದಯಕ್ಕೆ ಹಿತಕರ, ವಾಕರಿಕೆಯನ್ನು ನಿವಾರಿಸುತ್ತದೆ. ಶೀತ, ಕೆಮ್ಮು, ಶ್ವಾಸ ಕೋಶದ ತೊಂದರೆಗಳನ್ನು ಗುಣಪಡಿಸುತ್ತದೆ, ಜ್ವರದ ತಾಪವನ್ನು ಕಡಿಮೆಗೊಳಿಸುತ್ತದೆ .
    ಕೊತ್ತಂಬರಿ ಸೊಪ್ಪನ್ನು ಸಲಾಡ್, ಚಟ್ನಿ, ಪದಾರ್ಥಗಳಲ್ಲಿ ಉಪಯೋಗಿಸಬಹುದು. ಬೀಜವನ್ನು ಸಾಂಬಾರ ಪದಾರ್ಥದ ಜೊತೆ ಸೇವಿಸಿರಿ ಅಥವಾ ಕಷಾಯ ಮಾಡಿರಿ . ಒಂದು ಚಮಚ ಕೊತ್ತಂಬರಿ ಬೀಜ ಒಂದು ಕಪ್ ನೀರಿನಲ್ಲಿ ರಾತ್ರಿ ನೆನೆಸಿ ಮರುದಿನ ಸೇವಿಸುವುದರಿಂದ ದೇಹವು ಆರೋಗ್ಯದಾಯಕವಾಗುತ್ತದೆ. ಕೊತ್ತಂಬರಿ ಬೀಜ, ಜೀರಿಗೆ, ಬೆಲ್ಲ, ಹಳದಿ ಸೇರಿಸಿ ಕಷಾಯ ಮಾಡಬಹುದು.

    ಪುದೀನ – ಪಿತ್ತವನ್ನು ಶಮನಗೊಳಿಸುವ ಪುದೀನಾ ಬೇಸಿಗೆಯಲ್ಲಿ ಬಳಸುವುದು ಸೂಕ್ತ. ಪರಿಮಳಯುಕ್ತ ಈ ಸೊಪ್ಪಿನಿಂದ ಅನೇಕ ರುಚಿಕರ ಖಾದ್ಯಗಳನ್ನು ಮಾಡಬಹುದು. ಇದನ್ನು ಚಟ್ನಿ ಸಲಾಡ್ಗಳಲ್ಲಿಯೂ ಕೂಡ ಉಪಯೋಗಿಸುತ್ತಾರೆ. ಇದು ಜೀರ್ಣಕಾರಕ ಆದ್ದರಿಂದ ಅಜೀರ್ಣದ ಸಮಸ್ಯೆ ಇರುವವರು ಪುದೀನಾ ಚಹಾವನ್ನು ತಯಾರಿಸಿ ಅದಕ್ಕೆ ಜೇನು ತುಪ್ಪವನ್ನು ಬೆರೆಸಿ ಸೇವಿಸಬಹುದು. ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ. ಮೂರು ಅಥವಾ ನಾಲ್ಕು ಚಮಚ ಸೊಪ್ಪಿನ ರಸವನ್ನು ಸೇವಿಸಿದರೆ ವ್ಯಾಧಿಕ್ಷಮತ್ವವನ್ನು ಹೆಚ್ಚಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ, ಮೈಗ್ರೇನ್, ಆರ್ತ್ರೈಟಿಸ್ ನೋವನ್ನು ನಿವಾರಿಸುತ್ತದೆ. ಇದರ ಎಲೆಯ ಕಣಕವನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಮಾಯವಾಗುತ್ತದೆ.

    ಮಣ್ಣಿನ ಮಡಿಕೆಯಲ್ಲಿ ಸಂಗ್ರಹಿಸಿದ ನೀರಿನ ಆರೋಗ್ಯ ಲಾಭಗಳು – ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಣ್ಣಿನ ಮಡಿಕೆಯಲ್ಲಿ ನೀರನ್ನು ಶೇಖರಿಸುತ್ತಿದ್ದರು. ಈಗಲೂ ಕೂಡ ಕೆಲವರ ಮನೆಯಲ್ಲಿ ನೀರನ್ನು ಮಡಿಕೆಯಲ್ಲಿ ಸಂಗ್ರಹಿಸುವುದನ್ನು ನಾವು ಕಾಣಬಹುದು. ಆಹಾ! ಆ ನೀರಿನಲ್ಲಿ ಎಂಥಾ ಸ್ವಾದ ಎಷ್ಟು ತಂಪು ಕೂಡ. ಮಡಿಕೆಯ ನೀರು ಕುಡಿದ ಮೇಲೆ ತೃಪ್ತಿಯ ಅನುಭವವಾಗುವುದು. ಬೇಸಿಗೆಯಲ್ಲಿ ಇದರ ಉಪಯೋಗ ಬರೀ ದೇಹವನ್ನು ತಂಪು ಮಾಡುವುದಲ್ಲದೆ ಆರೋಗ್ಯಕ್ಕೂ ಹಿತಕರ. ಶೀತ ಕೆಮ್ಮಿನಿಂದ ಬಳಲುವವರೂ ಕೂಡ ಸೇವಿಸಬಹುದು ಯಾವುದೇ ಆರೋಗ್ಯ ಹಾನಿ ಉಂಟುಮಾಡುವುದಿಲ್ಲ. ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಅಧಿಕ ಸಮಯದ ತನಕ ಶುದ್ಧವಾಗಿರುತ್ತದೆ. ನಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ .

    ಎಳನೀರು – ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ದೊರೆಯುವಂತಹ ನೈಸರ್ಗಿಕ ತಂಪು ಪಾನೀಯವೆಂದರೆ ಎಳನೀರು. ಇದರ ಆರೋಗ್ಯ ಲಾಭವೂ ಅಧಿಕ. ಈ ಎಳನೀರು ದೇಹವನ್ನು ತಂಪು ಮಾಡುವುದಲ್ಲದೆ, ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಇದು ಶೀತ ಪ್ರಕೃತಿ ಹಾಗೂ ಮಧುರ ಗುಣಗಳಿಂದ ಕೂಡಿರುವುದರಿಂದ ಜೀರ್ಣಕಾರಿ ಹಾಗೂ ಬೇಸಿಗೆಗೆ ಉತ್ತಮ ಆರೋಗ್ಯಕರ ಪಾನೀಯವೆನಿಸಿದೆ. ಪಿತ್ತದೋಷವನ್ನು ಶಮನಗೊಳಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಇದರ ಉಪಯೋಗ ಒಳ್ಳೆಯದು. ಬಿಕ್ಕಳಿಕೆ, ಅಸಿಡಿಟಿ, ಕಣ್ಣುರಿ, ಕೈಕಾಲು ಉರಿಯನ್ನು ಕಡಿಮೆಗೊಳಿಸುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಕಿಸುತ್ತದೆ. ಹೃದಯಕ್ಕೆ ಹಾಗೂ ಯಕೃತ್ತಿಗೆ ಹಿತಕರ. ರಕ್ತದೊತ್ತಡ ನಿಯಂತ್ರಿಸುತ್ತದೆ, ಕೊಬ್ಬನ್ನು ಕರಗಿಸುತ್ತದೆ, ಎಲುಬನ್ನು ಸದೃಡಗೊಳಿಸುತ್ತದೆ. ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುತ್ತದೆ. ನಮ್ಮ ತ್ವಚೆಗೆ ಕೂಡ ಒಳ್ಳೆಯದು. ತ್ವಚೆಯನ್ನು ಮೃದು ಹಾಗೂ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ದಿನಕ್ಕೆ ಎರಡು ಲೋಟ ಎಳನೀರು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಬಹುದು.

    ಮಜ್ಜಿಗೆ – ಮಜ್ಜಿಗೆಯನ್ನು ಸಾಧಾರಣವಾಗಿ ಎಲ್ಲರ ಮನೆಗಳಲ್ಲಿ ಮಾಡುತ್ತಾರೆ. ಊಟದ ನಂತರ ಮಜ್ಜಿಗೆ ಅನ್ನ ಅಥವಾ ಮಜ್ಜಿಗೆ ಕುಡಿದರೆ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಮಜ್ಜಿಗೆಯನ್ನು ಯಾರು ದಿನಾಲು ಸೇವಿಸುತ್ತಾರೋ ಅವರಿಗೆ ರೋಗ ಬರುವುದಿಲ್ಲವೆಂದು ಆಯುರ್ವೇದದಲ್ಲಿ ಹೇಳಿದೆ. ಮಜ್ಜಿಗೆಯೂ ನಮ್ಮ ಜೀರ್ಣಾಂಗವನ್ನು ಶುದ್ಧಗೊಳಿಸಿ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ ಹಾಗೂ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ವಯಸ್ಸಾದಂತೆ ನಮ್ಮ ತ್ವಚೆಯು ಸುಕ್ಕು ಗಟ್ಟುವುದು, ಬಿಳಿ ಕೂದಲು, ದೃಷ್ಟಿ ಮಂದವಾಗುವುದು ಮರೆವಿನ ಲಕ್ಷಣಗಳು ಕಾಣಿಸುತ್ತದೆ. ಅದೇ ಒಂದು ಲೋಟ ಮಜ್ಜಿಗೆಯನ್ನು ಸೇವಿಸುವುದರಿಂದ ವಯಸ್ಸಾಗುವ ಲಕ್ಷಣಗಳನ್ನು ದೂರಕ್ಕೆ ತಳ್ಳಬಹುದು. ಮಜ್ಜಿಗೆಯು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಮಜ್ಜಿಗೆಯ ಜೊತೆ ಜೀರಿಗೆ ಪುಡಿ ಬಳಸಿ ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಮಜ್ಜಿಗೆಯು ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿವೈರಲ್, ಆಂಟಿ ಕ್ಯಾನ್ಸರ್ ಗುಣಗಳಿಂದ ಕೂಡಿದೆ. ಕೊಲೆಸ್ಟ್ರಾಲನ್ನು ಕಡಿಮೆಗೊಳಿಸುತ್ತದೆ. ಆ್ಯಸಿಡಿಟಿ, ಎದೆ ಉರಿಗಳನ್ನು ಶಮನ ಮಾಡುತ್ತದೆ. ವಿಷಕಾರಿ ಪದಾರ್ಥಗಳನ್ನು ಹೊರಹಾಕುತ್ತದೆ. ಆದರೆ ನೆನಪಿಡಿ ರಾತ್ರಿ ಮಜ್ಜಿಗೆಯನ್ನು ಸೇವಿಸುವುದು ಹಿತಕರವಲ್ಲ. ಬೆಳಿಗ್ಗೆ ಅಥವಾ ಮಧ್ಯಾಹ್ನ ಮಜ್ಜಿಗೆ ಸೇವಿಸುವುದು ಉತ್ತಮ. ಪೋಷಕಾಂಶಬರಿತ ಮಜ್ಜಿಗೆಯನ್ನು ದಿನಾಲು ಬಳಸಿ ಆರೋಗ್ಯದಿಂದಿರಿ.









      error: Content is protected !!
      Scroll to Top