ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ – ದೂರು ದಾಖಲು
ಕಾರ್ಕಳ : ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಕಾರ್ಕಳದ ವಿದ್ಯಾರ್ಥಿ ಸಂಘಟನೆಯೊಂದರ ಸುಮಾರು 50 ಯುವಕರು ನಗರದ ಸರ್ವಜ್ಞ ಸರ್ಕಲ್‌ನಲ್ಲಿ ಏ. 19ರಂದು ರಾತ್ರಿ 8.30 ಗಂಟೆಗೆ ಪಂಜಿನ ಮೆರವಣಿಗೆ ನಡೆಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪ್ರಾಧಿಕಾರದ ಯಾವುದೇ ಅನುಮತಿ ಪಡೆಯದೆ ಪಂಜಿನ ಮೆರವಣಿಗೆ ನಡೆಸಿ ರಸ್ತೆಗೆ ಅಡ್ಡ ನಿಂತು ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡಿದ್ದಾರೆ. ಅಲ್ಲದೆ ಮೆರವಣಿಗೆಯ ಮುಂದಾಳತ್ವ ವಹಿಸಿದ್ದ ಹರ್ಷಿತ್, ಶ್ರೇಯಸ್ ಮತ್ತು ಗಣೇಶ್ ಎಂಬವರು ಘಟನೆಯನ್ನು ಖಂಡಿಸಿ ಘೋಷಣೆ ಕೂಗಿದ್ದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಫ್ಲೈಯಿಂಗ್ ಸ್ಕ್ವಾಡ್-2, ಹಿರಿಯ ಸಹಾಯ ತೋಟಗಾರಿಕೆ ನಿರ್ದೇಶಕ ಶ್ರೀನಿವಾಸ ಬಿ.ವಿ. ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


































