ಕಾರ್ಕಳ : ಶಸ್ತಾಸ್ತ್ರ ಕಾಯ್ದೆ ಪ್ರಕರಣದಲ್ಲಿ 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಜ್ವಲ್ ಪೂಜಾರಿ (30) ಬಂಧಿತ ಆರೋಪಿ.
ಕೊಲೆಗೆ ಯತ್ನ ಮತ್ತು ಶಸ್ತಾಸ್ತ್ರ ಕಾಯ್ದೆಯಡಿಯಲ್ಲಿ 2016 ರಲ್ಲಿ ಸುರತ್ಕಲ್ ಕಾಟಿಪಳ್ಳ ನಿವಾಸಿ ವಿಜ್ವಲ್ ಪೂಜಾರಿ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆದ್ದರಿಂದ ಈತನಿಗೆ ನ್ಯಾಯಾಲಯ ದಸ್ತಗಿರಿ ವಾರೆಂಟು ಹೊರಡಿಸಿತ್ತು. ಆರೋಪಿ ಮೈಸೂರಿನಲ್ಲಿರುವ ಸುಳಿವು ಸಿಕ್ಕ ಹಿನ್ನೆಲೆ ಕಾರ್ಕಳ ನಗರ ಠಾಣಾ ಪೊಲೀಸ್ ನಿರೀಕ್ಷಕ ನಾಗೇಶ್ ಕೆ., ಪೋಲೀಸ್ ಉಪ ನಿರೀಕ್ಷಕರಾದ ಧನಂಜಯ್ ಹಾಗು ಲೋಲಾಕ್ಷ ಇವರ ಮಾರ್ಗದರ್ಶನದಲ್ಲಿ, ಹೆಚ್.ಸಿ. ರಮೇಶ. ಹೆಚ್, ಹಾಗು ಪಿ.ಸಿ. ದರ್ಶನ್ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಏ. 18ರಂದು ಆರೋಪಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 20 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ



































