ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದು ಸಾಬೀತುಪಡಿಸಿದ ಕಲ್ಪನಾ ಚಾವ್ಲಾ

1962ರ ಮಾರ್ಚ್ 17ರಂದು ಹರ್ಯಾಣದ ಕರ್ನಾಲ್‌ನಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೊತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆಗಳನ್ನು ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜೊತೆ ಹೇಳುತ್ತಾ ಬೆಳೆದವರು ಆಕೆ.

ಬಾಲ್ಯದಿಂದಲೂ ಕಲ್ಪನಾಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ. ಮೂರನೇ ವಯಸ್ಸಿಗೇ ಅಪ್ಪನಿಗೆ ಆಕಾಶದಲ್ಲಿ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ. ಅಪ್ಪನೂ ಆಕೆಯ ಪ್ರತಿಯೊಂದು ಕನಸಿನ ಈಡೇರಿಕೆಗೆ ಊರುಗೋಲಾಗಿ ನಿಂತಿದ್ದರು.

ತನ್ನ ಕನಸಿನ ಭಾಗವಾಗಿ ನಾಸಾ ಸೇರಿದರು ಕಲ್ಪನಾ

ಹರ್ಯಾಣದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪೂರ್ತಿ ಮಾಡಿದ ಕಲ್ಪನಾ ತನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ತೆರಳಿದರು. ಅಲ್ಲಿ ಶ್ರೇಷ್ಠವಾದ ಕೊಲರೆಡೋ ವಿವಿಯಿಂದ ಬಾಹ್ಯಾಕಾಶ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪಡೆದರು.

ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೇರಬೇಕು ಎಂದು ಆಕೆಯದು ಭಾರಿ ದೊಡ್ಡ ಕನಸು. ಅದಕ್ಕಾಗಿ ಹತ್ತಾರು ಪರೀಕ್ಷೆ, ಸಂದರ್ಶನಗಳನ್ನು ಎದುರಿಸಿ 1988ರಲ್ಲಿ ಆಕೆ ತನ್ನ ಡೆಸ್ಟಿನಿಯಾದ ನಾಸಾಕ್ಕೆ ಆಯ್ಕೆ ಆಗುತ್ತಾರೆ. ಮುಂದೆ ಅತ್ಯಂತ ಕಠಿಣವಾದ ತರಬೇತು ಆಕೆ ಪಡೆಯುತ್ತಾರೆ.

ದೇಹ ಮತ್ತು ಮನಸ್ಸನ್ನು ಹುರಿಗೊಳಿಸಲು ಯೋಗ ಮತ್ತು ಪ್ರಾಣಾಯಾಮಗಳ ಮೊರೆ ಹೊಕ್ಕವರು ಅವರು ಮುಂದೆ ಯಾವ ಸವಾಲು ಕೂಡ ಎದುರಿಸಲು ಮಾನಸಿಕವಾಗಿ ಸಿದ್ಧರಾಗಲು ಕನಿಷ್ಠ ಎಂಟು ವರ್ಷ ಬೇಕಾಯಿತು. ಪ್ರತಿ ನಿತ್ಯವೂ ಅಪ್ಪನ ಜೊತೆ ಮಾತಾಡುತ್ತ ತನ್ನ ಕನಸುಗಳನ್ನು ಜೀವಂತವಾಗಿ ಇರಿಸಿದವರು ಕಲ್ಪನಾ.

1997 ನವೆಂಬರ್ 19, ಆ ದಿನವು ಬಂದೇ ಬಿಟ್ಟಿತು

ಪ್ರತಿಯೊಬ್ಬ ಸಾಧಕ ಒಂದು ದೊಡ್ಡ ಅವಕಾಶಕ್ಕಾಗಿ ಕಾಯುತ್ತಾ ಇರುತ್ತಾರೆ. ಹಾಗೆ ಕಲ್ಪನಾ ಬದುಕಿನಲ್ಲಿ ಆ ಒಂದು ದೊಡ್ಡ ಅವಕಾಶವು ಬಂದೇ ಬಿಟ್ಟಿತು.
ನಾಸಾದ STS-87 ಕೊಲಂಬಿಯಾ ವ್ಯೋಮ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರುವ ಅವಕಾಶವು ಆಕೆಗೆ ದೊರೆಯಿತು. ಓರ್ವ ಭಾರತೀಯ ಮೂಲದವರಾಗಿ ನಿಜವಾಗಿ ಅದೊಂದು ಐತಿಹಾಸಿಕ ಸಾಧನೆ. ಕಲ್ಪನಾ ಆ ಕೊಲಂಬಿಯಾ ನೌಕೆಯಲ್ಲಿ ಕುಳಿತು ಬಾಹ್ಯಾಕಾಶಕ್ಕೆ ಹಾರಿದರು. ಎರಡು ವಾರಗಳ ಕಾಲ ಬಾಹ್ಯಾಕಾಶದಲ್ಲಿಯೇ ಕಳೆದರು. ಹತ್ತಾರು ಸಂಶೋಧನೆ ಮಾಡಿದರು. ಅವರನ್ನು ಹೊತ್ತ ಕೊಲಂಬಿಯಾ ನೌಕೆ 65 ಲಕ್ಷ ಕಿಲೋಮೀಟರ್ ಹಾರಿತು. 252 ಬಾರಿ ತನಗೆ ನಿಗದಿ ಪಡಿಸಿದ ಕಕ್ಷೆಯನ್ನು ಸುತ್ತಿ ಮುಗಿಸಿ ಮತ್ತೆ ಭೂಮಿಗೆ ಮರಳಿ ಬಂದಾಗ ಕಲ್ಪನಾ ಚಾವ್ಲಾ ಭಾರತೀಯರ ಪಾಲಿಕೆ ದೇವಕನ್ಯೆಯೇ ಆಗಿ ಬಿಟ್ಟಿದ್ದರು.

ಜಗತ್ತಿನ ಕಣ್ಮಣಿ ಆದರು ಕಲ್ಪನಾ ಚಾವ್ಲಾ

ಜಗತ್ತಿನ ಎಲ್ಲ ಪತ್ರಿಕೆಗಳೂ ಆಕೆಯ ಬಗ್ಗೆ ಕಾಲಂ ಬರೆದವು. ಜಾಗತಿಕ ಮಟ್ಟದ ಟಿವಿ ಚಾನೆಲ್‌ಗಳು ಆಕೆಯ ಸಂದರ್ಶನಕ್ಕೆ ತುದಿಗಾಲಲ್ಲಿ ನಿಂತವು. ಭಾರತದಿಂದ ನಾಸಾ ಸೇರಿದ ಓರ್ವ ಮಧ್ಯಮ ವರ್ಗದ ಹೆಣ್ಣು ಮಗಳು ಭಾರತದ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಆಕಾಶದ ಎತ್ತರವೂ ಕಡಿಮೆಯೇ ಎಂದು ಸಾಬೀತು ಮಾಡಿ ತೋರಿಸಿದ್ದರು.

ಎರಡನೇ ಬಾರಿ ಬಾಹ್ಯಾಕಾಶ ಯಾನಕ್ಕೆ ಕಲ್ಪನಾ ಆಯ್ಕೆ ಆದರು

ಮೊದಲ ಬಾಹ್ಯಾಕಾಶ ಯಾನವು ಯಶಸ್ವಿಯಾದ ನಂತರ ಆಕೆ ನಾಸಾದಲ್ಲಿ ಎಲ್ಲರ ಕಣ್ಮಣಿ ಆಗಿದ್ದರು. ಆಕೆ ತನ್ನ 21ನೆಯ ವರ್ಷದಲ್ಲಿ ತನ್ನ ಸಹಪಾಠಿ ಜೀನ್ ಹ್ಯಾರಿಸನ್ ಅವರನ್ನು ಪ್ರೀತಿ ಮಾಡಿ ಮದುವೆಯಾದರು. ಆತನು ಕಲ್ಪನಾ ಅವರ ಪ್ರತಿಯೊಂದು ಕನಸಿಗೆ ಬೆಂಬಲವಾಗಿ ನಿಂತದ್ದು ಕೂಡ ಉಲ್ಲೇಖನೀಯ.

ಸುಮಾರು ಐದು ವರ್ಷಗಳ ದೊಡ್ಡ ಗ್ಯಾಪ್ ನಂತರ ನಾಸಾ ತನ್ನ ಮುಂದಿನ ವ್ಯೋಮಯಾತ್ರೆ ಯೋಜನೆಯನ್ನು ರೂಪಿಸಿತು. ಅದು STS-107 ಕೊಲಂಬಿಯಾ ಹೆಸರಿನ ಮಿಷನ್. ಈ ಬಾರಿ ಒಟ್ಟು ಏಳು ಮಂದಿ ಆಕಾಶಯಾನಿಗಳು ಆಯ್ಕೆ ಆಗಿದ್ದು ಆ ತಂಡದಲ್ಲಿ ಕಲ್ಪನಾ ಚಾವ್ಲಾ ಸೀನಿಯರ್ ಆಗಿದ್ದರು. 2003ರ ಜನವರಿ ತಿಂಗಳಲ್ಲಿ ಈ ಯಾತ್ರೆಯು ಆರಂಭವಾಯಿತು. ಎಲ್ಲ ಭಾರತೀಯರು ಕಣ್ಣು ತೆರೆದು ಈ ಯಾತ್ರೆಯನ್ನು ಗಮನಿಸುತ್ತಿದ್ದರು.

ಆ ದುರಂತವು ಸಂಭವಿಸಿಯೇ ಬಿಟ್ಟಿತು

ಸಾಕಷ್ಟು ಸಂಶೋಧನೆಯನ್ನು ಮಾಡಿದ ಈ ತಂಡ ಹಿಂದೆ ಬರುತ್ತಿರುವ ಸಂದರ್ಭದಲ್ಲಿ 2003 ಫೆಬ್ರುವರಿ 1ರಂದು ಭಾರಿ ದುರಂತವು ನಡೆದೇ ಹೋಯಿತು. ಬಾಹ್ಯಾಕಾಶದ ಕ್ಷೇತ್ರದಲ್ಲಿ ಅದೊಂದು ಅತ್ಯಂತ ದೊಡ್ಡ ದುರಂತವಾಗಿತ್ತು. ಏಳು ಜನ ಆಕಾಶಯಾತ್ರಿಗಳನ್ನು ಹೊತ್ತು ಹಾರುತ್ತಿದ್ದ STS-107 ಆಕಾಶ ನೌಕೆಯು ಭೂಮಿಯ ವಾಯುಮಂಡಲವನ್ನು ಪ್ರವೇಶಿಸುವ ಸಂದರ್ಭ ಆಕಾಶದಲ್ಲಿಯೇ ಸ್ಫೋಟವಾಗಿ ಎಲ್ಲ ಏಳು ಮಂದಿ ಬೂದಿಯಾಗಿ ಹೋದರು. ಅದರಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಆಗ ಆಕೆಗೆ ಕೇವಲ 41 ವರ್ಷ ವಯಸ್ಸು ಆಗಿತ್ತು.

ಆಕೆಗಾಗಿ ಮಿಡಿಯಿತು ಇಡೀ ಜಗತ್ತು

ಏಳು ಜನ ಸಂಶೋಧಕ ಆಕಾಶಯಾನಿಗಳನ್ನು ಆಪೋಶನ ತೆಗೆದುಕೊಂಡ ಆ ದುರಂತದ ಬಗ್ಗೆ ಇಡೀ ಜಗತ್ತು ಕಂಬನಿ ಮಿಡಿಯಿತು. ಕಲ್ಪನಾ ಬಗ್ಗೆ ಭಾರತದ ಮೂಲೆ ಮೂಲೆಗಳಲ್ಲಿ ಶ್ರದ್ಧಾಂಜಲಿ ಸಭೆಗಳು ನಡೆದವು. ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಕೆಯನ್ನು ಭಾರತದ ಪುತ್ರಿ ಎಂದು ಕರೆದು ಶ್ರದ್ಧಾಂಜಲಿ ನೀಡಿದರು. ಮುಂದೆ ಭಾರತ ಹಾರಿಸಿದ ಒಂದು ಕೃತಕ ಉಪಗ್ರಹಕ್ಕೆ ಕಲ್ಪನಾ ಹೆಸರು ಇಡಲಾಯಿತು. ನಾಸಾ ಆಕೆಯನ್ನು ಭಾವಪೂರ್ಣವಾಗಿ ಸ್ಮರಿಸಿತು. ಕರ್ನಾಟಕ ಸರಕಾರವು ಆಕೆಯ ಹೆಸರಿನಲ್ಲಿ ಓರ್ವ ಯುವ ವಿಜ್ಞಾನಿಯನ್ನು ಪ್ರತಿ ವರ್ಷ ಗೌರವಿಸುವ ಒಂದು ಪ್ರಶಸ್ತಿಯನ್ನು ಸ್ಥಾಪನೆ ಮಾಡಿತು. ತಮಿಳುನಾಡಿನ ಒಂದು ಪ್ರಮುಖವಾದ ರಸ್ತೆಗೆ ಕಲ್ಪನಾ ಚಾವ್ಲಾ ಹೆಸರನ್ನು ಇಡಲಾಯಿತು.

ಭರತ ವಾಕ್ಯ

ಭಾರತೀಯ ಮೂಲದ ಓರ್ವ ಹೆಣ್ಣು ಮಗಳು ಸಂಶೋಧನೆ ಮಾಡಲು ಬಹಳ ದೊಡ್ಡ ಕನಸು ಕಟ್ಟಿಕೊಂಡು ನಾಸಾಕ್ಕೆ ಹೋದದ್ದು, ಭಾರತದ ಮೊದಲ ಮಹಿಳಾ ವ್ಯೋಮಯಾನಿ ಆದದ್ದು, ಮುಂದೆ ಅದೇ ರೀತಿಯ ಎರಡನೇ ಯಾನಕ್ಕೆ ಪ್ರಯತ್ನವನ್ನು ಮಾಡಿ ಆಕಾಶದ ಹೊಳೆಯುವ ನಕ್ಷತ್ರಗಳ ನಡುವೆ ಒಂದು ಮಿನುಗು ನಕ್ಷತ್ರವಾದದ್ದು ನಮಗೆಲ್ಲರಿಗೂ ಒಂದು ಸ್ಫೂರ್ತಿದಾಯಕ ಹಾಗೂ ಒಂದು ದುಃಖದಾಯಕ ಘಟನೆ.
ಭಾರತದ ಮಹಾನ್ ಪುತ್ರಿಗೆ ನಮ್ಮ ಶ್ರದ್ಧಾಂಜಲಿ.

































































































error: Content is protected !!
Scroll to Top