ದಕ್ಷಿಣ ಕನ್ನಡ ಜನತೆಗೆ ಕೃತಜ್ಞತೆ ಹೇಳಿದ ಮೋದಿ

ಮಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಭಾನುವಾರ ರಾತ್ರಿ ಮಂಗಳೂರಿನಲ್ಲಿ ಭರ್ಜರಿ ರೋಡ್‌ ಶೋ ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇದಾದ ಒಂದು ತಾಸಿನೊಳಗೆ ತನ್ನ ಟ್ವಿಟ್ಟರ್‌ ಖಾತೆ ಮೂಲಕ ರೋಡ್‌ ಶೋ ಫೋಟೊಗಳನ್ನು ಹಾಕಿ ಕರಾವಳಿಯ ಜನರಿಗೆ ಕೃತಜ್ಞತೆ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದು ಕೊಂಡಿರುವ ಪ್ರಧಾನಿಯವರು, ಮಂಗಳೂರಿನಲ್ಲಿ ನಡೆದ ರೋಡ್‌ ಶೋನಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ ಮಂಗಳೂರು ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಜನತೆಗೆ ನನ್ನ ಕೃತಜ್ಞತೆಗಳು. ಕರ್ನಾಟಕದ ಈ ಭಾಗ ಹಾಗೂ ನಮ್ಮ ಪಕ್ಷದ ನಡುವೆ ಬಲಿಷ್ಠ ಬಾಂಧವ್ಯವಿದೆ. ಉತ್ತಮ ಆಡಳಿತದ ನಮ್ಮ ಸಿದ್ಧಾಂತ ಮತ್ತು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಆಚರಿಸುವ ನಮ್ಮ ಪ್ರಯತ್ನಗಳಿಗೆ ಜನತೆ ನಮ್ಮನ್ನು ವರ್ಷಗಳಿಂದ ಆಶೀರ್ವದಿಸಿದ್ದಾರೆ ಎಂದು ಹೇಳಿದ್ದಾರೆ.

ಮತಬ್ಯಾಂಕ್‌ ರಾಜಕಾರಣದಲ್ಲಿ ಮುಳುಗಿ ಜನರನ್ನು ವಿಭಜಿಸುವ ಕಾಂಗ್ರೆಸ್‌ಗೆ ಮತ ಹಾಕಲು ದಕ್ಷಿಣ ಕನ್ನಡಕ್ಕೆ ಸಾಧ್ಯವಿಲ್ಲ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಗುಂಪುಗಾರಿಕೆಯಲ್ಲಿ ನಿರತವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ. ಅವರಿಗೆ ಕರ್ನಾಟಕದ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾವು ಇಂದು ಬಿಡುಗಡೆ ಮಾಡಿದ ಸಂಕಲ್ಪ ಪತ್ರದಲ್ಲಿ ಮಂಗಳೂರು ಅಭಿವೃದ್ಧಿಗಾಗಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ವಿಶೇಷವಾಗಿ ನಗರಾಭಿವೃದ್ಧಿ ಮೂಲಕ “ಸುಗಮ ಜೀವನ” ಕಲ್ಪಿಸುವುದು ಮತ್ತು ಇತರ ಕೆಲಸಗಳನ್ನು ಮಾಡುತ್ತೇವೆ. ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ನಿರೂಪಿಸಲಾದ ದೃಷ್ಟಿಕೋನ ಕರಾವಳಿ ಆರ್ಥಿಕತೆಯನ್ನು ಪರಿವರ್ತಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

ಮೈಸೂರಿನಲ್ಲಿ ನಡೆದ ಬಿಜೆಪಿ ಸಮಾವೇಶದ ಬಳಿಕ ಪ್ರಧಾನಿಯವರು ಕಡಲನಗರಿ ಮಂಗಳೂರಿಗೆ ಆಗಮಿಸಿದ್ದರು. ಹಿಂದುತ್ವದ ಭದ್ರಕೋಟೆಗೆ ಆಗಮಿಸಿದ ಮೋದಿಯವರನ್ನು ಬಿಜೆಪಿ ನಾಯಕರು ಸ್ವಾಗತಿಸಿದರು. ಬಳಿಕ ಸುಮಾರು 2 ಕಿ.ಮೀ ರೋಡ್‌ ಶೋದಲ್ಲಿ ಮೋದಿಯವರು ಭಾಗಿಯಾದರು. ಪ್ರಧಾನಿಯವರನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಇಡೀ ಮಂಗಳೂರು ಕೇಸರಿಮಯವಾಗಿತ್ತು.

ರೋಡ್‌ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿಯೂ ಹೂಮಳೆ ಸುರಿಸಲಾಯಿತು. ನೆಚ್ಚಿನ ಪ್ರಧಾನಿಯನ್ನು ಕಂಡು ಅಭಿಮಾನಿಗಳು ಹುಚ್ಚೆದ್ದು ಕುಣಿದರು. ನಾರಾಯಣ ಗುರು ಸರ್ಕಲ್‌ನಿಂದ ನವಭಾರತ್‌ ವೃತ್ತದವರೆಗೆ ಪ್ರಧಾನಿಯವರು ತೆರೆದ ವಾಹನದಲ್ಲಿ ರೋಡ್‌ ಶೋ ನಡೆಸಿದರು. ಈ ವೇಳೆ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಜೇಶ್‌ ಚೌಟ ಹಾಗೂ ಉಡುಪಿ – ಚಿಕ್ಕಮಗಳೂರು ಅಭ್ಯರ್ಥಿ ಶ್ರೀನಿವಾಸ ಪೂಜಾರಿ ಜೊತೆಗಿದ್ದರು.

































































































error: Content is protected !!
Scroll to Top