ಕಾಣೆಯಾಗಿದ್ದ ನೇಮಕಾತಿ ಆಯ್ಕೆಪಟ್ಟಿ ಕಡತ ಪತ್ತೆ

ಬೆಂಗಳೂರು: ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಿರಿಯ ಎಂಜಿನಿಯರ್‌ ನೇಮಕಾತಿ ಆಯ್ಕೆಪಟ್ಟಿ ಕಡತ ಕರ್ನಾಟಕ ಲೋಕಸೇವಾ ಆಯೋಗ ಕಚೇರಿಯಲ್ಲೇ ಪತ್ತೆಯಾಗಿದೆ. 2016ರಲ್ಲಿ ಕೊಳಗೇರಿ‌ ಮಂಡಳಿ ಜೂನಿಯರ್ ಇಂಜಿನಿಯರ್ ನೇಮಕಾತಿ ಪರೀಕ್ಷೆ ನಡೆದಿತ್ತು. 2018ರಲ್ಲಿ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಎಚ್‌.ಡಿ. ವಿವೇಕಾನಂದ ಎಂಬುವವರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಹೈಕೋರ್ಟ್ ಆದೇಶದಂತೆ ಕೆಪಿಎಸ್​ಸಿ ಗೌಪ್ಯ ಶಾಖೆ-3ರಲ್ಲಿ ಆಯ್ಕೆ ಪಟ್ಟಿ ತಯಾರಿಸಲಾಗಿತ್ತು. ಜನವರಿ 22ರಂದು ಕಾರ್ಯದರ್ಶಿಯವರ ಆಪ್ತ ಶಾಖೆಯಲ್ಲಿ ಕಡತ ಸ್ವೀಕಾರ ಮಾಡಲಾಯಿತು. ಆ ಬಳಿಕ ಕಡತ ನಾಪತ್ತೆಯಾಗಿತ್ತು.
ಕೆಪಿಎಸ್​ಸಿಯ‌ ಎಲ್ಲ ಶಾಖೆಗಳಲ್ಲೂ ಕಡತಕ್ಕಾಗಿ ಶೋಧ ನಡೆಸಲಾಗಿತ್ತು. ಕಡತ ಪತ್ತೆಯಾದಲ್ಲಿ ಕೂಡಲೇ ಶಾಖೆ-2ಕ್ಕೆ‌ ಹಿಂದಿರುಗಿಸುವಂತೆ ಕೆಪಿಎಸ್​ಸಿ ಜ್ಞಾಪನ ಹೊರಡಿಸಿತ್ತು. ಬಳಿಕ‌ ಕೆಪಿಎಸ್​ಸಿ ಸಿಬ್ಬಂದಿ ಕಡತಕ್ಕಾಗಿ ಎಲ್ಲೆಡೆ ಶೋಧ ನಡೆಸಿದ್ದರು. ಅಧಿಕಾರಿ, ಸಿಬ್ಬಂದಿ ಸುಮಾರು ಒಂದು ತಿಂಗಳು ಕಾಲ ಶೋಧ ನಡೆಸಿದರು. ಆದರೆ ಕಡೆತ ಎಲ್ಲೂ ಸಿಕ್ಕಿರಲಿಲ್ಲ. ಹೀಗಾಗಿ ಕಡತ ನಾಪತ್ತೆ ಬಗ್ಗೆ ದೂರು ದಾಖಲಿಸಲು ಆಯೋಗ ಸಭೆ ನಡೆಸಿ ನಿರ್ಧಾರ ಕೈಗೊಂಡು, ಕಾರ್ಯದರ್ಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿ, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಇದೀಗ ಕಡತ ಮರಳಿ ಕೆಪಿಎಸ್‌ಸಿ ಕಚೇರಿಯಲ್ಲಿ ಪತ್ತೆಯಾಗಿರುವುದು ಹಲವಾರು ಅನುಮಾನಕ್ಕೆಡೆಮಾಡಿಕೊಟ್ಟಿದೆ. ಯಾರೋ ಕಡತ ಒಯ್ದು ವಾಪಸು ತಂದಿಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

























































































































error: Content is protected !!
Scroll to Top