ಕೇಜ್ರಿವಾಲ್‌ ಬಂಧನದ ವಿರುದ್ಧ ವಿಪಕ್ಷ ನಾಯಕರ ಆಕ್ರೋಶ

ಹೊಸದಿಲ್ಲಿ: ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಬಂಧಿಸಿರುವುದಕ್ಕೆ ಇಂಡಿ ಮೈತ್ರಿಕೂಟದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಜನ ನಿಮಗೆ ತಕ್ಕ ಪ್ರತ್ಯುತ್ತರ ನೀಡುತ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಹೆದರಿದ ಸರ್ವಾಧಿಕಾರಿ, ಸತ್ತ ಪ್ರಜಾಪ್ರಭುತ್ವವನ್ನು ರಚಿಸಲು ಬಯಸುತ್ತಾರೆ. ಮಾಧ್ಯಮ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ವಶಪಡಿಸಿಕೊಂಡು, ಪಕ್ಷ ಒಡೆಯುವುದು, ಸಂಸ್ಥೆಗಳಿಂದ ಹಣ ವಸೂಲಿ, ಪ್ರಮುಖ ವಿರೋಧ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸುವುದು. ಇಷ್ಟೇ ಸಾಕಾಗದೇ ಇದ್ದಾಗ ಇದೀಗ ಚುನಾಯಿತ ಮುಖ್ಯಮಂತ್ರಿಗಳ ಬಂಧನವೂ ಮಾಮೂಲಿಯಾಗಿಬಿಟ್ಟಿದೆ. ಇದಕ್ಕೆ INDIA ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳ ದುರುಪಯೋಗವನ್ನು ನಾನು ಬಲವಾಗಿ ಖಂಡಿಸುತ್ತೇನೆ, ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಎಷ್ಟರಮಟ್ಟಿಗೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ಈ ಬಂಧನ ತೋರಿಸುತ್ತದೆ. ಅರವಿಂದ್ ಕೇಜ್ರಿವಾಲ್ ವಿರುದ್ಧದ ಈ ಅಸಂವಿಧಾನಿಕ ಕ್ರಮದ ವಿರುದ್ಧ ‘INDIA’ ಒಟ್ಟಾಗಿದೆ ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಈ ಭಯದಿಂದ ಚುನಾವಣೆ ವೇಳೆಗೆ ಯಾವುದೇ ವಿಧಾನದಿಂದ ವಿರೋಧ ಪಕ್ಷದ ನಾಯಕರನ್ನು ಸಾರ್ವಜನಿಕರಿಂದ ದೂರವಿಡಲು ಬಯಸುತ್ತಿದೆ. ಇದಕ್ಕೆ ಬಂಧನವಷ್ಟೇ ಸಬೂಬು. ಈ ಬಂಧನದ ವಿರುದ್ಧ ಜನರು ಹೊಸ ಕ್ರಾಂತಿಗೆ ನಾಂದಿ ಹಾಡಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪೋಸ್ಟ್ ಮಾಡಿದ್ದಾರೆ.

2024ರ ಚುನಾವಣೆಯ ಮೊದಲು ಒಂದು ದಶಕದ ವೈಫಲ್ಯಗಳು ಮತ್ತು ಸನ್ನಿಹಿತವಾದ ಸೋಲಿನ ಭಯದಿಂದ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ದಿಲ್ಲಿ ಮುಖ್ಯಮಂತ್ರಿಯನ್ನು ಬಂಧಿಸುವ ಮೂಲಕ ಪಾತಾಳಕ್ಕೆ ಇಳಿದಿದೆ. ಹೇಮಂತ್ ಸೋರೆನ್ ನಂತರ ಅರವಿಂದ್ ಕೇಜ್ರಿವಾಲ್ ಅನ್ಯಾಯವಾಗಿ ಗುರಿಯಾಗಿದ್ದಾರೆ ಎಂದು ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟೀಕಿಸಿದ್ದಾರೆ.













































































error: Content is protected !!
Scroll to Top