ಜೀವಭಯ ಇದೆ ಎಂದು ನೆಪ ಹೇಳಿ ಒಂದೇ ಕಡೆ ಇರಲು ಅರ್ಜಿ ಸಲ್ಲಿಸಿದ್ದ ಆರೋಪಿಗಳು
ಬೆಂಗಳೂರು: ತಮ್ಮನ್ನು ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಿ ಒಂದೇ ಕಡೆ ಇಡಬೆಕೆಂದು ಆಗ್ರಹಿಸಿ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಜೀವಭಯ ಇದೆ ಹಾಗೂ ತಮ್ಮ ವಕೀಲರೊಂದಿಗೆ ಚರ್ಚಿಸಲು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಕೋರಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳು ಅರ್ಜಿ ಸಲ್ಲಿಸಿದ್ದರು.
ಬಿಜೆಪಿಯ ಯುವ ಮೋರ್ಚಾ ಮುಖಂಡರಾಗಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸದ್ಯ ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಸುಳ್ಯ ತಾಲೂಕಿನ ಎತ್ತಿನಹೊಳೆಯ ಅಬ್ದುಲ್ ಬಷೀರ್ ಸೇರಿದಂತೆ ಬಳ್ಳಾರಿ, ಧಾರವಾಡ, ಶಿವಮೊಗ್ಗ, ಮೈಸೂರು, ವಿಜಯಪುರ ಮತ್ತು ಕಲಬುರಗಿ ಜೈಲುಗಳಲ್ಲಿರುವ ಒಟ್ಟು 11 ಜನ ಆರೋಪಿಗಳು ತಮ್ಮನ್ನು ಒಂದೇ ಕಡೆ ಇರಿಸಲು ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಅರ್ಜಿದಾರರನ್ನು ಒಂದೇ ಕಡೆ ಇರಿಸಿದಲ್ಲಿ ಅವರೆಲ್ಲಾ ಮತ್ತೊಂದು ಪಿತೂರಿ ನಡೆಸಲು ಸಿದ್ದತೆ ಮಾಡಿಕೊಳ್ಳಬಹುದು. ಅಂತೆಯೇ ಅವರು ಈಗಿರುವ ಜೈಲುಗಳಲ್ಲಿ, ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿಲ್ಲ. ಅರ್ಜಿದಾರ ಕತೆಗಳನ್ನೆಲ್ಲಾ ನಂಬಬಾರದು ಎಂದು ನ್ಯಾಯಪೀಠ ಎಂಬ ವಾದವನ್ನು ಎತ್ತಿಹಿಡಿದು ನ್ಯಾಯಾಲಯ ಆರೋಪಿಗಳನ್ನು ಸ್ಥಳಾಂತರಿಸಲು ನಿರಾಕರಿಸಿದೆ. ರಾಜ್ಯದ ಎಲ್ಲಾ ಜೈಲುಗಳಲ್ಲಿ ವಿಡಿಯೊ ಕಾನ್ಪೆರೆನ್ಸ್ ವ್ಯವಸ್ಥೆಯಿದೆ. ಅವರಿಗೆ ಅಗತ್ಯವಿದ್ದ ಸಂದರ್ಭದಲ್ಲಿ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹ ಕೇವಲ 4 ಸಾವಿರ ಕೈದಿಗಳ ಸಾಮರ್ಥ್ಯ ಹೊಂದಿದ್ದು ಇಲ್ಲೀಗ 5,200 ಕೈದಿಗಳನ್ನು ಇರಿಸಲಾಗಿದೆ. ಎಲ್ಲ ಅರ್ಜಿದಾರರನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ನ್ಯಾಯಪೀಠ ಹೇಳಿದೆ.








































