ಲೋಕಸಭೆ ಚುನಾವಣೆಗೂ ಮೊದಲೇ ದೊಡ್ಡ ಸಮಸ್ಯೆಯೊಂದನ್ನು ನಿವಾರಿಸಿಕೊಂಡ ಬಿಜೆಪಿ
ಮಂಗಳೂರು : ಕೊನೆಗೂ ಪುತ್ತೂರಿನ ಬಂಡಾಯ ಶಮನಗೊಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಲೋಕಸಭೆ ಚುನಾವಣೆಗೂ ಮುಂಚಿತವಾಗಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಪುತ್ತೂರಿನ ಬಂಡಾಯ ನಾಯಕ ಅರುಣ್ ಪುತ್ತಿಲ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ದೊಡ್ಡ ತಲೆನೋವೊಂದನ್ನು ಬಿಜೆಪಿ ನಿವಾರಿಸಿಕೊಂಡಿದೆ. ಗುರುವಾರ ಬೆಂಗಳೂರಿನಲ್ಲಿ ಅರುಣ್ ಪುತ್ತಿಲ ಸಹಿತ ಪುತ್ತಿಲ ಪರಿವಾರದ ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ನಾಯಕರನ್ನು ಭೇಟಿ ಮಾಡಿ ಸಂಧಾನದ ಮಾತುಕತೆ ನಡೆಸಿದ್ದಾರೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಈ ಸಂಧಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇನ್ನು ಅಧಿಕೃತವಾಗಿ ಸೇರುವ ಔಪಚಾರಿಕತೆ ಮಾತ್ರ ಉಳಿದುಕೊಂಡಿದೆ. ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸೇರ್ಪಡೆ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಮಾತುಕತೆ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಅರುಣ್ ಕುಮಾರ್ ಪುತ್ತಿಲ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ಪುತ್ತಿಲ ಕುಲದ ಅಧ್ಯಕ್ಷ ಪ್ರಸನ್ನ ಮಾರ್ತ ಹಾಗೂ ಪಕ್ಷದ ಕಾರ್ಯಕರ್ತರು ಜತೆಗಿದ್ದರು.
ರಾಜ್ಯದಲ್ಲಿ ಕಳೆದ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದ್ದಕ್ಕೆ ಪುತ್ತಿಲ ಬಿಜೆಪಿ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಬಿಜೆಪಿ ಸೋಲಿಗೆ ಕಾರಣರಾಗಿದ್ದರು. ಈ ಸಲವೂ ಲೋಕಸಭೆ ಚುನಾವಣೆಗೆ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ನೀಡಿದರೆ ತಾನು ಸ್ಪರ್ಧಿಸುವುದಾಗಿ ಹೇಳಿದ್ದರು.
























