30 ವರ್ಷದ ಹಿಂದೆ ಸತ್ತ ಆರೋಪಿಯನ್ನು ಹುಡುಕಾಡಿದ ಪೊಲೀಸರು

ಕಾರ್ಕಳ : 30 ವರ್ಷದ ಹಿಂದೆಯೇ ಮೃತಪಟ್ಟಿದ್ದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಈಗ ಹುಡುಕಾಡಿ ಅವನು ಸತ್ತಿದ್ದಾನೆ ಎನ್ನುವುದನ್ನು ದೃಢಪಡಿಸಿಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. 1981 ಎಪ್ರಿಲ್ 8ರಂದು ನಡೆದ ಪ್ರಕರಣದಲ್ಲಿ ಭಾಗಿಯಾಗಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ಪಡುಬಿದ್ರಿ ಪೊಲೀಸರು ಪ್ರಯತ್ನ ನಡೆದಿದ್ದು, ಆರೋಪಿಯು 30 ವರ್ಷಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ ಸಾವಿಗೀಡಾಗಿದ್ದನೆಂಬ ಅಶ್ವರ್ಯಕರ ವಿಷಯ ಆಗಷ್ಟೇ ಪೊಲೀಸರಿಗೆ ತಿಳಿದುಬಂದಿದೆ.

1981 ಎಪ್ರಿಲ್ 8ರಂದು ಈ ಘಟನೆ ನಡೆದಿತ್ತು. ಕಾರ್ಕಳ ತಾಲೂಕು ಬೆಳ್ಮಣ್ಣು ಗ್ರಾಮದ ವಿಶ್ವನಾಥ, ಬಾಬು, ದಿವಾಕರ, ಜಗ್ಗು ಹಾಗು ಮಂಜರಪಲ್ಕೆಯ ಸುಧಾಕರ ಶೆಟ್ಟಿ ಎಂಬವರು ಸರಕಾರಿ ಜಾಗದಿಂದ ಅಕ್ರಮವಾಗಿ ಮರಗಳನ್ನು ಕಡಿದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ ಮಂಗಳೂರು ವಿಶೇಷ ಅರಣ್ಯ ದಳದ ಅಧಿಕಾರಿ ಹಾಗೂ ಸಿಬ್ಬಂದಿ ನಂದಿಕೂರು ಪೇಟೆಯಲ್ಲಿ ಲಾರಿ ಸಮೇತ ಆರೋಪಿಗಳನ್ನು ಹಿಡಿದು ಶಿರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.
ಬಳಿಕ ಆರೋಪಿಗಳ ವಿರುದ್ಧ ಅರಣ್ಯ ಕಾಯಿದೆ ಹಾಗು ಕಳವು ಪ್ರಕರಣ ದಾಖಲಾಗಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ಕಡತ ಪಡುಬಿದ್ರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆರೋಪಿಗಳು ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು.
ಆರೋಪಿಗಳಲ್ಲಿ ಒಬ್ಬನಾದ ಮಂಜರಪಲ್ಕೆಯ ಸುಧಾಕರ ಶೆಟ್ಟಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಕಾರ್ಕಳ ಪಿಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಸುಧಾಕರ ಶೆಟ್ಟಿ ವಿರುದ್ಧ ಎಲ್‌ಪಿಸಿ (Long Pending Case) ಪ್ರಕರಣ ದಾಖಲಿಸಿ ದಸ್ತಗಿರಿಗೆ ವಾರಂಟ್ ಹೊರಡಿಸಿತ್ತು.
ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಸನ್ನ ಎಂ.ಎಸ್. ನಿರ್ದೇಶನದಂತೆ ಎಎಸ್‌ಐ ರಾಜೇಶ್ ಪಿ. ವಾರಂಟ್ ಆರೋಪಿ ಸುಧಾಕರ ಶೆಟ್ಟಿ ಪತ್ತೆಗೆ ತನಿಖೆ ಕೈಗೊಂಡಾಗ ಆರೋಪಿ 1994 ಮಾಚ್೯ 29 ರಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪಡುಬಿದ್ರಿ ಪೊಲೀರು ಕಾರ್ಕಳ ಪುರಸಭೆಯಿಂದ ಮರಣ ದೃಢಪತ್ರವನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ನ್ಯಾಯಾಲಯ ಪ್ರಕರಣ ಮುಕ್ತಾಯಗೊಳಿಸಿದೆ.

















































error: Content is protected !!
Scroll to Top