ಸರಕಾರದ ಜಾನುವಾರು ವಿರೋಧಿ ನೀತಿ ಖಂಡನೀಯ : ಸಾಣೂರು ನರಸಿಂಹ ಕಾಮತ್
ಕಾರ್ಕಳ : 2019ರ ಜಾನುವಾರು ಗಣತಿಯಯ ಆಧಾರದ ಮೇಲೆ ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶದ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳನ್ನು ಮುಚ್ಚಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದ್ದು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ನಡೆಸುತ್ತಿದೆ. ರಾಜ್ಯ ಸರಕಾರದ ಈ ರೀತಿಯ ಜನವಿರೋಧಿ ಮತ್ತು ಜಾನುವಾರು ವಿರೋಧಿ ನೀತಿ ತೀರ ಖಂಡನೀಯ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ರಾಜ್ಯದ ಹೈನುಗಾರರು ಏರುತ್ತಿರುವ ಉತ್ಪಾದನಾ ವೆಚ್ಚದಿಂದ, ಹೈನುಗಾರಿಕೆಯಲ್ಲಿ ತೀರಾ ನಷ್ಟವನ್ನು ಅನುಭವಿಸುತ್ತಿದ್ದು, ಈಗಾಗಲೇ ನೂರಾರು ಗ್ರಾಮೀಣ ಭಾಗದ ಕುಟುಂಬಗಳು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ಪಶು ವೈದ್ಯರ ಕೊರತೆಯಿಂದ, ಸಕಾಲದಲ್ಲಿ ಪಶುಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗದೆ ಸಂಕಟ ಪಡುತ್ತಿರುವ ಹೈನುಗಾರರಿಗೆ ಇದೀಗ ಹತ್ತಿರದಲ್ಲೇ ಲಭ್ಯವಿರುವ ಪಶು ಚಿಕಿತ್ಸಾಲಯಗಳನ್ನು ಮುಚ್ಚಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಖಾಲಿಯುರುವ ಹುದ್ದೆ ಭರ್ತಿಗೊಳಿಸಿ
ಕಳೆದ ವಾರವಷ್ಟೇ ಪ್ರತಿ ಟನ್ ಪಶು ಆಹಾರಕ್ಕೆ ರೂಪಾಯಿ 500 ಹೆಚ್ಚಿಸಿರುವುದರಿಂದ ಹಾಗೂ ಆರು ತಿಂಗಳಿನಿಂದ ಪ್ರೋತ್ಸಾಹ ಧನ ಖಾತೆಗೆ ಜಮೆಯಾಗದೆ ಖರ್ಚು ವೆಚ್ಚಗಳನ್ನು ಹೊಂದಿಸಿಕೊಳ್ಳಲು ಗ್ರಾಮೀಣ ಭಾಗದ ರೈತಾಪಿ ವರ್ಗ ಹೆಣಗಾಡುತ್ತಿರುವಾಗ, ಸರಕಾರ ಈ ರೀತಿಯ ನಿರ್ಧಾರ ಕೈಗೊಂಡಿರುವುದು ತೀರ ಖಂಡನೀಯ. ಈಗಾಗಲೇ ರಾಜ್ಯದಲ್ಲಿರುವ ಪಶು ಚಿಕಿತ್ಸಾಲಯಗಳು ಪಶುವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದಾಗಿ ತೀರ ಒತ್ತಡದ ಮಧ್ಯೆ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಸರಕಾರ ಕೂಡಲೆ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳಲ್ಲಿ ಖಾಲಿ ಇರುವ ಪಶು ವೈದ್ಯರು ಹಾಗೂ ಸಿಬ್ಬಂದಿಗಳ ಹುದ್ದೆಗಳನ್ನು ಭರ್ತಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರೋತ್ಸಾಹ ಧನ ಪಾವತಿಯಾಗಲಿ
ಏರುತ್ತಿರುವ ಪಶು ಆಹಾರ ದರವನ್ನು ಸರಿದೂಗಿಸಲು ನಂದಿನಿ ಪಶುವಹಾರಕ್ಕೆ ಪ್ರತಿ ಕೆಜಿಗೆ ಕನಿಷ್ಠ 5/-ರೂಪಾಯಿ ಸಬ್ಸಿಡಿ ಹಣ ಒದಗಿಸಬೇಕು. ಕಳೆದ ಆರು ತಿಂಗಳಿನಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ಏಕಕಂತಿನಲ್ಲಿ ಪಾವತಿ ಮಾಡಿ ಮುಂದಿನ ತಿಂಗಳಿನಿಂದ ಪ್ರತಿ ತಿಂಗಳು ಪ್ರೋತ್ಸಾಹ ಧನ ರೈತರ ಖಾತೆಗೆ ಜಮೆ ಆಗುವಂತೆ ಸರಕಾರ ನೋಡಿಕೊಳ್ಳಬೇಕು.
ಕಳೆದ ಬಜೆಟ್ ನಲ್ಲಿ ಸರಕಾರ ಪ್ರೋತ್ಸಾಹ ಧನವನ್ನು 5/- ರೂಪಾಯಿಯಿಂದ 7/-ರೂಪಾಯಿಗೆ ಏರಿಸುತ್ತೇವೆಂದು ಭರವಸೆ ನೀಡಿದ್ದರು. ಪ್ರೋತ್ಸಾಹ ಧನವನ್ನು ಮುಂದಿನ ಬಾರಿ ಕನಿಷ್ಠ 10 ರೂಪಾಯಿಗೆ ಏರಿಸಿದರೆ ಮಾತ್ರ ರಾಜ್ಯದಲ್ಲಿ ಹೈನುಗಾರಿಕೆ ಉಳಿಯಲು ಸಾಧ್ಯ. ಹಾಲು ಸಂಗ್ರಹದ ಕೊರತೆಯಿಂದಾಗಿ ಈಗಾಗಲೇ ರಾಜ್ಯದ ನೂರಾರು ಹಾಲು ಉತ್ಪಾದಕರ ಸಂಘಗಳು ನಷ್ಟದ ಹಾದಿಯನ್ನು ಹಿಡಿದಿದ್ದು ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳ ತಿಂಗಳ ಸಂಬಳವನ್ನು ಕೊಡಲು ಕೂಡ ಹೆಣಗಾಡುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸರಕಾರ ಕೂಡಲೇ ರಾಜ್ಯದ ಹೈನುಗಾರಿಕೆ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ತುರ್ತು ಆರ್ಥಿಕ ನೆರವು ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ನರಸಿಂಹ ಕಾಮತ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


































