ಕಿರಿಯರಿಗೆ ಕಬಡ್ಡಿ ಸಾಧಕಿ ಮಮತಾ ಪೂಜಾರಿ ಕಿವಿಮಾತು
ನ್ಯೂಸ್ ಕಾರ್ಕಳ ಜತೆ ಮುಕ್ತವಾಗಿ ಮಾತನಾಡಿ ನೆನಪಿನ ಬುತ್ತಿಬಿಚ್ಚಿದ ಕಾರ್ಕಳದ ಹುಡುಗಿ
ಕಾರ್ಕಳ: ಅಂತಾರಾಷ್ಟ್ರೀಯ ಮಹಿಳಾ ದಿನದಂಗವಾಗಿ ನ್ಯೂಸ್ ಕಾರ್ಕಳ ತಾಲೂಕಿನ ಕ್ರೀಡಾಸಾಧಕಿ ಮಹಿಳೆಯೊಬ್ಬರನ್ನು ಮಾತನಾಡಿಸಿತು. ಅವರು ಬೇರೆ ಯಾರೂ ಅಲ್ಲ, ಈಗಾಗಲೇ ಕಬಡ್ಡಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಭಾರತಕ್ಕೆ ಹಲವು ಪದಕಗಳನ್ನು ತಂದುಕೊಟ್ಟಿರುವ ಹೆರ್ಮುಂಡೆಯ ಮಮತಾ ಪೂಜಾರಿ. ಪುರುಷರಷ್ಟೇ ಆಡುವ ಕ್ರೀಡೆ ಎಂದು ಪರಿಗಣಿತವಾಗಿರುವ ಕಬಡ್ಡಿಯಲ್ಲಿ ಮಹಿಳೆಯರು ಮಿಂಚ ತೊಡಗಿದ್ದೇ ಇತ್ತೀಚೆಗಿನ ಕೆಲ ವರ್ಷಗಳಿಂದ. ಇಂಥ ಪರಿಸ್ಥಿತಿಯಲ್ಲಿ ದಿಟ್ಟತನದಿಂದ ಕಬಡ್ಡಿ ಆಡಿ ಬಹಳಷ್ಟು ಸಾಧನೆ ಮಾಡಿದವರು ನಮ್ಮ ಮಮತಾ ಪೂಜಾರಿ. ಹೆರ್ಮುಂಡೆ ಎಂಬ ಗುಡ್ಡಗಾಡಿನ, ಯಾವ ಮೂಲಸೌಲಭ್ಯಗಳೂ ಇಲ್ಲದ ಊರಿನ ಹುಡುಗಿಯೊಬ್ಬಳು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಸಾಧಕಿಯಾದದ್ದೇ ಒಂದು ರೋಚಕ ಕಥೆ.
ಮಹಿಳೆಯರಿಗೆ ತುಂಬಾ ಸಮಸ್ಯೆಗಳಿರುತ್ತವೆ. ಅದರಲ್ಲೂ ಕ್ರೀಡಾಪಟು ಆದವರಿಗೆ ಸಮಸ್ಯೆಗಳು ಇನ್ನೂ ಹೆಚ್ಚು. ಇದಕ್ಕೆಲ್ಲ ಎದೆಗುಂದದೆ ಮುನ್ನಡೆಯುವ ಛಾತಿ ಇದ್ದರಷ್ಟೇ ಇಲ್ಲಿ ಏನಾದರೂ ಸಾಧಿಸಲು ಸಾಧ್ಯ ಎನ್ನುತ್ತಾರೆ ಮಮತಾ ಪೂಜಾರಿ. ಆಟ ಆಡುವಾಗ ಪ್ರಾರಂಭದಲ್ಲಿ ಗಾಯಗಳಾಗೋದು, ಇನ್ನಿತರ ಅಡಚಣೆಗಳು ನಿರಂತರ ಬರುತ್ತಿರುತ್ತವೆ. ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚು ಚಿಂತಿಸದೆ ಸಾಧನೆಯತ್ತ ಗಮನ ನೆಟ್ಟರೆ ಮಾತ್ರ ಕ್ರೀಡೆಯಲ್ಲಿ ಮುಂದೆ ಬರುತ್ತಾರೆ ಎನ್ನುತ್ತಾರೆ ಮಮತಾ.
ನಿಮ್ಮ ಜೀವನದಲ್ಲಿ ಏನಾಗಬೇಕು ಎಂದು ಬಯಸಿದ್ದೀರೋ ಅದನ್ನೇ ಮಾಡಿ. ಅವರಿವರು ಹೇಳಿದರು ಎಂದು ನಿಮ್ಮ ಗುರಿಯನ್ನು ಬದಲಾಯಿಸುತ್ತಾ ಹೋಗಬೇಡಿ, ನೀವು ಇಷ್ಟಪಡುವ ಕ್ಷೇತ್ರದಲ್ಲಿ ಪರಿಶ್ರಮ ಹಾಕಿದರೆ ಮಾತ್ರ ಸಾಧಿಸಿ ಗುರಿ ತಲುಪಲು ಸಾಧ್ಯ. ಎಲ್ಲ ಹೆತ್ತವರು ತಮ್ಮ ಮಗಳು ಲಕ್ಷಣವಾಗಿ ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಗೃಹಿಣಿಯಾಗಿ ನೆಮ್ಮದಿಯಿಂದ ಜೀವನ ನಡೆಸಿದರೆ ಸಾಕು ಎಂದೇ ಬಯಸುತ್ತಾರೆ. ಇದನ್ನೇ ನೀವು ನಂಬಿದರೆ ದೇಶದ ಕೋಟ್ಯಂತರ ಮಹಿಳೆಯರಲ್ಲಿ ನೀವೂ ಒಬ್ಬರಾಗುತ್ತೀರಾ ಹೊರತು, ಕೋಟಿಗೊಬ್ಬರು ನೀವು ಆಗುವುದು ಸಾಧ್ಯವಿಲ್ಲ ಎನ್ನುವುದು ಮಮತಾ ಪೂಜಾರಿ ಕಿರಿಯರಿಗೆ ಹೇಳುವ ಕಿವಿಮಾತು.


ಹಾಗೇ ನೋಡಿದರೆ ಮಮತಾ ಪೂಜಾರಿ ಎಲ್ಲ ಕ್ರೀಡೆಗಳನ್ನು ಆಡುತ್ತಿದ್ದರು. ಎಲ್ಲ ಕ್ರೀಡೆಗಳಲ್ಲಿ ಬಹುಮಾನವೂ ಬರುತ್ತಿತ್ತು. ಆರಂಭದಲ್ಲಿ ಅವರು ಕಬಡ್ಡಿ ಹೊರತುಪಡಿಸಿ ಎಲ್ಲ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಮುನಿಯಾಲಿನಲ್ಲಿ ವಾಲಿಬಾಲ್ ಆಡುತ್ತಿದ್ದರು, ಹೈಟ್, ಸ್ಪೀಡ್ ಚೆನ್ನಾಗಿದ್ದ ಕಾರಣ ಬಳಿಕ ಕಬಡ್ಡಿಗೆ ಬಂದರು. ಮುಂದಿನದ್ದೆಲ್ಲ ಇತಿಹಾಸವಾಯಿತು.
ರಾಮಕೃಷ್ಣ ಹೆಗ್ಡೆ ಅವರು ದೈಹಿಕ ಶಿಕ್ಷಣ ಶಿಕ್ಷಕರು, ರಮೇಶ್ ಸುವರ್ಣ ಕಬಡ್ಡಿ ತರಬೇತಿ ನೀಡುತ್ತಿದ್ದರು. ಕರ್ನಾಟಕ ಸ್ಟೇಟ್ ಅಂಡರ್ 19 ಸೆಲೆಕ್ಟ್ ಆದೆ. ಗೋಕರ್ಣನಾಥ ಕಾಲೇಜಿನಲ್ಲಿ ಪುರುಷೋತ್ತಮ ಪೂಜಾರಿ ತರಬೇತಿ ನೀಡುತ್ತಿದ್ದರು. ಯುನಿವರ್ಸಿಟಿಯಲ್ಲಿ ಬಹಳ ಬೆಂಬಲ ಸಿಗುತ್ತಿತ್ತು. ಕ್ರೀಡೆಯಲ್ಲಿ ಈಗ ಉಜ್ವಲ ಭವಿಷ್ಯವಿದೆ. ನೌಕರಿ ಖಂಡಿತ ಸಿಗುತ್ತದೆ ಎನ್ನುತ್ತಾರೆ ಮಮತಾ.
ಮುಂಬೈ ದಾದರ್‌ನಲ್ಲಿ ಆಲ್ ಇಂಡಿಯಾ ಟೂರ್ನಮೆಂಟ್, ಸೆಂಟ್ರಲ್ ರೈಲ್ವೆ, ಕಲ್ಕತ್ತಾ, ಸದರ್ನ್ ರೈಲ್ವೆ, ಕರ್ನಾಟಕ ಸ್ಟೇಟ್ ಟೀಂಗೆ ಆಡಿದೆ. 2006ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದೆ. ಶ್ರೀಲಂಕಾದಲ್ಲಿ ಮ್ಯಾಚ್ ನಡೆಯಿತು. ಹಂತ ಹಂತವಾಗಿ ಬೆಳೆದೆ. ನನಗೆ ಉತ್ತಮ ಬೆಂಬಲ ಸಿಗುತ್ತಾ ಇತ್ತು. ಅಪ್ಪ, ಅಮ್ಮ,ಅಣ್ಣ,ತಂಗಿ ಸಪೋರ್ಟ್ ಮಾಡುತ್ತಿದ್ದರು ಎಂದು ಗತವನ್ನು ನೆನಪಿಸಿಕೊಳ್ಳುತ್ತಾರೆ ಮಮತಾ ಪೂಜಾರಿ.
ಇಂಡಿಯಾಕ್ಕಾಗಿ ಸೆಲೆಕ್ಟ್ ಆಗಿರೋದು, ಕ್ಯಾಪ್ಟನ್ ಆದದ್ದು, ಅರ್ಜುನ ಅವಾರ್ಡ್ ಪಡೆದ್ದು, ಇಂಡಿಯಾ ಪರವಾಗಿ ಆಡಿ ಬಂದಾಗ ಕಾರ್ಕಳ ಬಸ್ ಸ್ಟ್ಯಾಂಡ್‌ನಲ್ಲಿ ಸಿಕ್ಕಿದ ಅದ್ದೂರಿ ಸ್ವಾಗತ, ಮೆರವಣಿಗೆ ಮಾಡಿದ್ದು. ಊರಿನವರ ಪ್ರೀತಿ… ಹೀಗೆ ಬದುಕಿನಲ್ಲಿ ಮರೆಯಲಾರದ ಕ್ಷಣಗಳು ಮಮತಾ ಜೀವನದಲ್ಲಿ ಅನೇಕ ಇವೆ.


































