ಡಿಎಸ್ಎಸ್ ಕಚೇರಿ ಎದುರು ಜಮಾವಣೆ
ಕಾರ್ಕಳ : ಪರಿಶಿಷ್ಟ ಜಾತಿಗೆ ಸೇರಿದ ಮಾಳ ಗ್ರಾಮದ ಮುಗೇರ್ಕಳ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಯಿಂದಲೇ ಅನ್ಯಾಯವಾಗಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಹಕ್ಕೋತ್ತಾಯ ನಡೆಸಿರುವ ಘಟನೆ ಮಾ. 4ರಂದು ಕಾರ್ಕಳದಲ್ಲಿ ಸಂಭವಿಸಿದೆ.
ಈ ಪರಿಸರದಲ್ಲಿ ಸುಮಾರು 15 ದಲಿತ ಕುಟುಂಬಗಳು ವಾಸವಿದೆ. ಅಲ್ಲಿನ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ 2023ರಲ್ಲಿ ಸರಕಾರ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ರಸ್ತೆ ಕಾಮಗಾರಿ ಆರಂಭವಾಗಿದ್ದು, ಜಲ್ಲಿ ಹಾಕುವ ಕೆಲಸವೂ ನಡೆಯುತ್ತಿತ್ತು. ಈ ವೇಳೆ ದಲಿತ ಸಮುದಾಯಕ್ಕೆ ಸೇರಿದ ಕಮಲ ಎಂಬವರು ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಡುವುದಿಲ್ಲ ಎಂದು ತಕರಾರು ಮಾಡಿದ್ದರು. ಈ ಸಂದರ್ಭ ದಲಿತ ಸಂಘರ್ಷ ಸಮಿತಿಯವರು ಕಮಲ ಅವರಲ್ಲಿ ಮಾತನಾಡಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ಆದರೆ ಅವರು ಭರವಸೆ ನೀಡಿದಂತೆ ನಡೆದುಕೊಂಡಿಲ್ಲ. ಹೀಗಾಗಿ ರಸ್ತೆ ನಿರ್ಮಾಣಕ್ಕೆ ತೊಡಕಾಗಿದ್ದು ಸ್ಥಳೀಯರಿಗೆ ಅನ್ಯಾಯವಾಗಿದೆ ಎಂದು ದೂರಿದರು.
ಅನುದಾನ ವಾಪಸ್
2024 ಮಾರ್ಚ್ ಅಂತ್ಯದೊಳಗೆ (ಅನುದಾನ ಬಿಡುಗಡೆಯಾದ ಒಂದು ವರ್ಷದ ಅವಧಿ) ರಸ್ತೆ ನಿರ್ಮಾಣದ ಕಾಮಗಾರಿ ಪೂರ್ಣವಾಗದಿದ್ದಲ್ಲಿ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನ ಹಿಂದಕ್ಕೆ ಹೋಗಲಿದೆ. ಆದ್ದರಿಂದ ಈ ಸಂದರ್ಭ ದಲಿತ ಸಂಘರ್ಷ ಸಮಿತಿ ಸಮಸ್ಯೆ ಪರಿಹರಿಸದೆ ಮಹಿಳೆಯ ಪರವಾಗಿದ್ದು ಸಮುದಾಯದ ಉಳಿದವರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಶ್ರೀನಿವಾಸ್ ಮಾಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.








































