ವಿಜ್ಞಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸಿ – ಶಶಿಕಾಂತ್ ಕರಿಂಕ
ಕಾರ್ಕಳ : ಪ್ರಕೃತಿಯನ್ನು ದೇವರೆಂದು ಪೂಜಿಸುವವರು ನಾವು, ಆದ್ದರಿಂದ ವಿಜ್ಞಾನವನ್ನು ಪರಿಸರಕ್ಕೆ ಪೂರಕವಾಗಿ ಬಳಸಬೇಕು. ವಿದ್ಯಾರ್ಥಿಗಳು ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಸುಲಭವಾಗಿ ನಂಬದೆ ಸತ್ಯಾಸತ್ಯತೆಗಳನ್ನು ಪರಿಶೀಲಿಸುವ ಮನೋಭಾವವನ್ನು ಬೆಳೆಸಬೇಕು ಎಂದು ನಿಟ್ಟೆ ಡಾ.ಎನ್.ಎಂ.ಎ.ಎಂ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶಶಿಕಾಂತ್ ಕರಿಂಕ ಹೇಳಿದರು.
ಅವರು ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಫಾ.ಎಫ್.ಪಿ.ಎಸ್ ಮೋನಿಸ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ವಿದ್ಯಾರ್ಥಿಗಳು ಪರಿಸರವನ್ನು ಮತ್ತು ಇಲ್ಲಿನ ವಿಸ್ಮಯಗಳನ್ನು ಕೇವಲ ವೀಕ್ಷಿಸಬಾರದು ಬದಲಾಗಿ ಅವಲೋಕಿಸಬೇಕು ಎಂದು ಹೇಳಿದರು.
ಕಾರ್ಕಳದ ಸಿವಿಲ್ ಇಂಜಿನಿಯರ್ ನಾಸಿರ್ ಶೇಖ್ ಮಾತನಾಡಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸುವಂತಹ ಕಾರ್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ನಡೆಸುವುದರಿಂದ ವಿಜ್ಞಾನದತ್ತ ವಿದ್ಯಾರ್ಥಿಗಳು ತೆರೆದುಕೊಳ್ಳುತ್ತಾರೆ ಎಂದರು.

ಸಂಸ್ಥೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಹೇಮಲತ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕಿ ವಿಜೇತಾ ಹಾಗೂ ವಿದ್ಯಾರ್ಥಿ ಮೊಹಮ್ಮದ್ ರಫಾನ್ ವಿಜ್ಞಾನ ದಿನದ ಕುರಿತು ಅಭಿಪ್ರಾಯ ಹಂಚಿಕೊಂಡರು. ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೇರಿಯನ್ ಡಿ’ಸೋಜ, ಸಂಸ್ಥೆಯ ಆಪ್ತ ಸಮಾಲೋಚಕಿ ಸಿಸ್ಟರ್ ಶಾಲೆಟ್ ಸಿಕ್ವೇರಾ, ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಾದ ಫಿಯೋನಾ ರಿಯಾ ಪಿಂಟೋ ಸ್ವಾಗತಿಸಿ, ಶೆರಿನಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಯಶಸ್ ವಂದಿಸಿದರು.







































