ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಪೆರೋಲ್ ಕೋರಿಕೆ
ಉಡುಪಿ : ಉಡುಪಿಯ ನೇಜಾರು ಸಮೀಪ ತೃಪ್ತಿ ಲೇಔಟ್‌ನಲ್ಲಿಕ ಕಳೆದ ನ.12ರಂದು ಒಂದೇ ಕುಟುಂಬದ ನಾಲ್ಕು ಮಂದಿಯನ್ನು ಸಾಯಿಸಿದ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ವಜಾಗೊಳಿಸಿದೆ.
ಫೆ.1ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಿಧನರಾದ ಸಹೋದರ ನಿತಿನ್ ಅವರ ಅಂತ್ಯಕ್ರಿಯೆಯ ವಿಧಿಗಳಲ್ಲಿ ಪಾಲ್ಗೊಳ್ಳಲು ತಾತ್ಕಾಲಿಕ ಬಿಡುಗಡೆಗಾಗಿ ಫೆ.8 ರಂದು ಮೂರು ಗಂಟೆಗಳ ಅವಧಿಗೆ ಚೌಗುಲೆ ಪೆರೋಲ್ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಾಗ, ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಎಂ ನದಾಫ್ ಪೆರೋಲ್ ನೀಡುವ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಯನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿದರೆ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯಾಗುವ ಸಾಧ್ಯತೆಇದೆ ಎಂದು ವಾದಿಸಿದರು. ಆರೋಪಿ ಸಹೋದರನ ಮರಣ ಪ್ರಮಾಣಪತ್ರವನ್ನು ಒದಗಿಸಲು ವಿಫಲವಾಗಿದ್ದಾನೆಎಂದು ನದಾಫ್ ವಾದಿಸಿದರು.
ಈ ವಾದವನ್ನು ಪರಿಗಣಿಸಿದ ನ್ಯಾಯಾಧೀಶೆ ದೀಪಾ ಅವರು ಆರೋಪಿಗೆ ಪೆರೋಲ್ ನೀಡದೆ ಅರ್ಜಿಯನ್ನು ತಿರಸ್ಕರಿಸಿದರು.
ತನಿಖಾ ತಂಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್ ಫೆಬ್ರವರಿ 12ರಂದು ಉಡುಪಿ ನ್ಯಾಯಾಲಯಕ್ಕೆ ಸಲ್ಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪೊಲೀಸರ ಕೈಸೇರಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳೊಂದಿಗೆ ತನಿಖೆ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ.































































