ಲೋಕಸಭೆ ಚುನಾವಣೆ ಮುನ್ನ ಸಿಎಎ ಜಾರಿ : ಅಮಿತ್ ಶಾ

ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 370 ಮತ್ತು ಎನ್‌ಡಿಎ ಒಕ್ಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆ ಮುನ್ನ ಸಿಎಎ ಜಾರಿ

ಪೌರತ್ವ ತಿದ್ದುಪಡಿ ಕಾಯಿದೆ (CAA) ಕುರಿತು, 2019 ರಲ್ಲಿ ಜಾರಿಗೊಳಿಸಲಾದ ಕಾನೂನನ್ನು ನಿಯಮಗಳನ್ನು ಹೊರಡಿಸಿದ ನಂತರ ಲೋಕಸಭೆ ಚುನಾವಣೆಗೆ ಮೊದಲು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. 

ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಅಚ್ಚರಿಯಿಲ್ಲ. ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಮತ್ತೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ ಎಂದು ಈಗಾಗಲೇ ಮನವರಿಕೆ ಮಾಡಿಕೊಂಡಿವೆ ಎಂದು ಹೇಳಿದರು. ನಾವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದೇವೆ, (ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತ್ತು) ಜನತೆಗೆ ಕೊಟ್ಟ ಮಾತುಗಳನ್ನು ಈಡೇರಿಸಿದ್ದೇವೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನಗಳನ್ನು ಮತ್ತು ಎನ್‌ಡಿಎಗೆ 400 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ ಎಂದು ಅಮಿತ್ ಶಾ ಇಟಿ ನೌ ಗ್ಲೋಬಲ್ ಬಿಸಿನೆಸ್ ಶೃಂಗಸಭೆ 2024ನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.

ಸಂಸತ್ತಿನಲ್ಲಿ ಸರ್ಕಾರವು ಮಂಡಿಸಿದ ಶ್ವೇತಪತ್ರದ ಕುರಿತು ಮಾತನಾಡಿದ ಶಾ, 2014 ರಲ್ಲಿ ಅಧಿಕಾರವನ್ನು ಕಳೆದುಕೊಂಡಾಗ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಮೈತ್ರಿ (UPA) ಯಾವ ಗೊಂದಲವನ್ನು ಬಿಟ್ಟಿದೆ ಎಂಬುದನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ದೇಶಕ್ಕೆ ಇದೆ ಎಂದು ಹೇಳಿದರು.

2014ರಲ್ಲಿ ದೇಶದ ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿತ್ತು, ಎಲ್ಲೆಡೆ ಹಗರಣಗಳು ನಡೆಯುತ್ತಿದ್ದವು, ವಿದೇಶಿ ಹೂಡಿಕೆ ಬರುತ್ತಿರಲಿಲ್ಲ, ಆ ಸಮಯದಲ್ಲಿ ನಾವು ಶ್ವೇತಪತ್ರವನ್ನು ಹೊರತಂದಿದ್ದರೆ ಅದು ಜಗತ್ತಿಗೆ ತಪ್ಪು ಸಂದೇಶವನ್ನು ನೀಡುತ್ತಿತ್ತು. ಆದರೆ 10 ವರ್ಷಗಳ ನಂತರ ನಮ್ಮ ಸರ್ಕಾರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದೆ, ವಿದೇಶಿ ಹೂಡಿಕೆಯನ್ನು ತಂದಿದೆ, ಯಾವುದೇ ಭ್ರಷ್ಟಾಚಾರವಿಲ್ಲ, ಆದ್ದರಿಂದ ಶ್ವೇತಪತ್ರವನ್ನು ಪ್ರಕಟಿಸಲು ಇದು ಸರಿಯಾದ ಸಮಯ ಎಂದು ಅವರು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತು ಮಾತನಾಡಿದ ಗೃಹ ಸಚಿವರು, ರಾಮನ ಜನ್ಮ ಸ್ಥಳದಲ್ಲಿಯೇ ಮಂದಿರ ನಿರ್ಮಾಣವಾಗಬೇಕು ಎಂದು ದೇಶದ ಜನತೆ 500 ವರ್ಷಗಳಿಂದ ಬಯಸಿದ್ದರು. ಆದರೆ, ತುಷ್ಟೀಕರಣ ರಾಜಕಾರಣ ಮತ್ತು ಕಾನೂನು ಸುವ್ಯವಸ್ಥೆಯನ್ನು ಮುಂದಿಟ್ಟುಕೊಂಡು ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಸಿಕ್ಕಿರಲಿಲ್ಲ, ಇಂದು ಅದು ಈಡೇರಿದೆ ಎಂದರು. 































































































































error: Content is protected !!
Scroll to Top