ರಜೆ ಸಿಗುವುದಿಲ್ಲ ಎಂದು ಸಿಎಂ, ಡಿಸಿಎಂ ಪರೋಕ್ಷ ಸುಳಿವು
ಬೆಂಗಳೂರು : ರಾಮ ಮಂದಿರದಲ್ಲಿ ರಾಮನ ಪ್ರಾಣಪ್ರತಿಷ್ಠಾಪನೆಗೆ ರಾಜ್ಯ ಸರಕಾರ ರಜೆ ಕೊಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ. ರಜೆಯ ಬಗ್ಗೆ ನಾವಿನ್ನೂ ತೀರ್ಮಾನ ಕೈಗೊಂಡಿಲ್ಲ, ಬಿಜೆಪಿ ಶಾಸಕರು ಬರೆದಿರುವ ಪತ್ರಗಳನ್ನು ಇನ್ನೂ ನೋಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರೆ, ರಜೆಯ ಬಗ್ಗೆ ಬಿಜೆಪಿಯವರು ನಮಗೆ ಹೇಳಿಕೊಡಬೇಕಾಗಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ. ಇವರಿಬ್ಬರ ಹೇಳಿಕೆ ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಿಗೆ ರಜೆ ಸಿಗುವುದಿಲ್ಲ ಎನ್ನವುದನ್ನು ಪುಷ್ಟೀಕರಿಸುತ್ತದೆ.
ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯಗಳು ಸೋಮವಾರ ಸರ್ಕಾರಿ ರಜೆ ಘೋಷಣೆ ಮಾಡಿವೆ. ಕರ್ನಾಟಕದಲ್ಲಿ ರಜೆ ಘೋಷಣೆ ಮಾಡುವಂತೆ ಪ್ರತಿಪಕ್ಷಗಳು ಸರ್ಕಾರಕ್ಕೆ ಮನವಿ ಮಾಡಿದ್ದರೂ ಇಷ್ಟರ ತನಕ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಭಕ್ತಿ, ಗೌರವ ಧರ್ಮ ಪ್ರಚಾರಕ್ಕೆ ಮಾಡುವುದಿಲ್ಲ ಎಂದು ಹೇಳುವ ಮೂಲಕ ಡಿಕೆಶಿ ಸರ್ಕಾರಿ ರಜೆ ಘೋಷಣೆಗೆ ಆಗ್ರಹಿಸಿದ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ನಾವು ಭಕ್ತಿ, ಗೌರವ, ಧರ್ಮ ಪ್ರಚಾರಕ್ಕೆ ಮಾಡುವುದಿಲ್ಲ. ದೇಗುಲಗಳಲ್ಲಿ ಏನು ಆಚರಣೆ ಮಾಡಬೇಕು ಮಾಡುತ್ತಾರೆ. ಏನು ಪೂಜೆ, ಪುನಸ್ಕಾರ ಮಾಡಬೇಕು ಅದನ್ನು ಮಾಡುತ್ತೇವೆ. ನಮಗೆ ಯಾರೂ ಹೇಳುವ ಅವಶ್ಯಕತೆ ಇಲ್ಲ. ಪ್ರಾರ್ಥನೆಗಳಿಂದ ಫಲ ದೊರೆಯುತ್ತೆಂಬ ನಂಬಿಕೆ ನಮಗೆ. ಹಾಗಾಗಿ ಪ್ರಾರ್ಥನೆ ಮಾಡ್ಕೊಳ್ಳಿ ಎಂದು ಹೇಳುತ್ತಿದ್ದೇವೆ. ಸಿದ್ದರಾಮಯ್ಯ ಹೆಸರಲ್ಲಿ ರಾಮ, ನನ್ನ ಹೆಸರಲ್ಲಿ ಶಿವ ಇದ್ದಾನೆ. ನಮಗೆ ಯಾರೂ ಹೇಳಿಕೊಡಬೇಕಿಲ್ಲ, ಒತ್ತಡವೂ ಹಾಕಬೇಕಿಲ್ಲ. ರಾಜಕಾರಣದಲ್ಲಿ ಧರ್ಮ ಬೇಕು, ಧರ್ಮದಲ್ಲಿ ರಾಜಕಾರಣ ಅಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರಿ ರಜೆ ನೀಡಲು ನಿರಾಕರಿಸಿದ್ದಾರೆ.

ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಂದು ರಾಜ್ಯದಲ್ಲಿ ಸರ್ಕಾರಿ ರಜೆ ಘೋಷಿಸುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಜೆ ನೀಡಬೇಕೆಂಬ ಬಿಜೆಪಿಯ ಮನವಿ ಪತ್ರವನ್ನು ಇನ್ನೂ ನೋಡಿಲ್ಲ. ನೋಡುತ್ತೇನೆ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಮ ಪ್ರಾಣ ಪ್ರತಿಷ್ಠಾಪನೆ ದಿನದಿಂದು ರಾಜ್ಯದಲ್ಲಿ ರಜೆ ನೀಡಬೇಕೆಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕೂಡಾ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಹಿಂದೂ ಸಂಘಟನೆಗಳು ಸಹ ರಜೆಗೆ ಒತ್ತಾಯಿಸಿವೆ. ರಾಮಲಲ್ಲಾ ಪ್ರತಿಷ್ಠಾಪನೆಗೆ ಒಂದೇ ದಿನ ಬಾಕಿ ಉಳಿದಿದೆ. ಆದ್ರೆ, ರಾಜ್ಯ ಸರ್ಕಾರ ಇನ್ನೂ ತೀರ್ಮಾನ ಪ್ರಕಟಿಸಿಲ್ಲ.ಹೀಗಾಗಿ ರಜೆ ಸಿಗುವುದು ಅನುಮಾನ ಎನ್ನಲಾಗುತ್ತಿದೆ.































