20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿ
ಮಂಗಳೂರು: ಹಲವೆಡೆ ಕಳವು ಕೃತ್ಯ ನಡೆಸಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕಸಬಾ ಬೆಂಗ್ರೆಯ ಮೊಹಮ್ಮದ್ ಆಸಿಫ್(32) ಮತ್ತು ಮೊಹಮ್ಮದ್ ಸಫ್ವಾನ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳು ಪಡುಬಿದ್ರಿ ಗ್ರಾಮ ಸೇವಾಕೇಂದ್ರ, ಕದ್ರಿ ಜಂಕ್ಷನ್‌ನ ಮೊಬೈಲ್ ಅಂಗಡಿ, ಪೈಂಟ್ ಅಂಗಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವುಗೈದಿದ್ದರು. ಪೊಳಲಿ ದ್ವಾರದ ಬಳಿಯ ಹೋಟೆಲ್, ಅಂಗಡಿಗಳಲ್ಲಿ, ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ತರ ಸಹಕಾರ ಸಂಘದಲ್ಲಿ ಕಳವು ಮಾಡಿದ್ದರು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಮಂಕಿಸ್ಟ್ಯಾಂಡ್ ಹಾಗೂ ಉತ್ತರ ದಕ್ಕೆಯಲ್ಲಿ ದ್ವಿಚಕ್ರ ವಾಹನವನ್ನು ಕಳವುಗೈದಿದ್ದರು. ಆರೋಪಿಗಳ ಬಳಿ ಇದ್ದ ಎರಡು ದ್ವಿಚಕ್ರ ವಾಹನಗಳು ಹಾಗೂ 1.20 ಲ.ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ಪೂರ್ವ ಪೊಲೀಸ್ ಠಾಣೆಯ 3 ಪ್ರಕರಣ, ಬಂಟ್ವಾಳ ನಗರ ಪೊಲೀಸ್ ಠಾಣೆಯ 3 ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 1 ಕಳವು ಪ್ರಕರಣಗಳಲ್ಲಿ ಈ ಕಳ್ಳರು ಭಾಗಿಯಾಗಿರುವುದು ದೃಢಪಟ್ಟಿದೆ. ಮೊಹಮ್ಮದ್ ಆಸಿಫ್ ಯಾನೆ ಆಸಿಫ್ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಬರ್ಕೆ ಪೊಲೀಸ್ ಠಾಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಬಗ್ಗೆ ವಾರೆಂಟ್ ಹೊರಡಿಸಲಾಗಿತ್ತು.


































































