ಕಾರ್ಕಳ : ಬಸ್ರಿ ಬೈಲೂರು ಅಂಗನವಾಡಿ ಕೇಂದ್ರದಲ್ಲಿ ನ. 23 ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಬೈಲೂರು ಗ್ರಾಮದ ಬೀಟ್ ಪೊಲೀಸ್ ಶಿವರಾಜ್ ಮಾತನಾಡಿ, ಅಂಗನವಾಡಿಯಲ್ಲಿ ಉಲ್ಲಾಸಭರಿತ ವಾತಾವರಣ ಮಕ್ಕಳಿಗೆ ಮುಂದಿನ ಶೈಕ್ಷಣಿಕ ಜೀವನಕ್ಕೆ ಬೇಕಾದ ಚೈತನ್ಯವನ್ನು ನೀಡುತ್ತದೆ ಎಂದ ಅವರು ಪೋಕ್ಸೋ ಕಾಯಿದೆ ಕುರಿತು ವಿವರಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಉಮಾ ಅಂಗನವಾಡಿ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳು ಹಾಗೂ ಇಲಾಖೆಯಿಂದ ಗರ್ಭಿಣಿ, ಬಾಣಂತಿಯರಿಗೆ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಮುದಾಯ ಆರೋಗ್ಯ ಅಧಿಕಾರಿ ತೇಜಸ್ವಿನಿ ಮಾತನಾಡುತ್ತಾ ಮಕ್ಕಳಲ್ಲಿ ಕಂಡು ಬರುವ ಅನಿಮಿಯ ಮತ್ತು ಅತಿಸಾರ ಭೇದಿಯ ಲಕ್ಷಣಗಳು ಹಾಗೂ ನಿವಾರಣಾ ಕ್ರಮದ ಬಗ್ಗೆ ತಿಳಿಸಿದರು.
ಸುರೇಶ್ ನಾಯಕ್ ಹಾಗೂ ಸಂಗೀತ ದಂಪತಿ ಕೇಂದ್ರದ ಪುಟಾಣಿಗಳಿಗೆ 20 ಬೇಬಿ ಚೆಯಾರ್ ಕೊಡುಗೆಯಾಗಿ ನೀಡಿದರು. ಇದೇ ಸಂದರ್ಭ ಛದ್ಮವೇಷ ಹಾಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಮೀನಾ, ಬಸ್ರಿ ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ ಕಾಮತ್. ಬೈಲೂರು ಗ್ರಾಮ ಪಂಚಾಯತ್ ಸದಸ್ಯೆ ಅಶ್ವಿತಾ ಶೆಟ್ಟಿ, ಅಂಗನವಾಡಿ ಸಹಾಯಕಿ ನಳಿನಿ, ಸುಜಾತಾ, ವನಿತಾ, ಸುನಿತಾ, ಪೋಷಕರು, ಸ್ತ್ರೀಶಕ್ತಿ ಸದಸ್ಯರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ವಾಣಿ ಕಾರ್ಯಕ್ರಮ ನಿರ್ವಹಿಸಿದರು.
































