‘ಪಡು ತಿರುಪತಿ’ಎಂದೇ ಕೀರ್ತಿ ಪಡೆದ ಕಾರ್ಕಳದಲ್ಲಿ ಈ ರವಿವಾರ(ನ. 19) ಮುಂಜಾನೆ ಸೂರ್ಯೋದಯಕ್ಕೂ ಮೊದಲು ‘ವಿಶ್ವರೂಪ ದರ್ಶನ ‘ ನೆರವೇರಲಿದೆ. ಕಾರ್ಕಳದ ಭಕ್ತರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಾಗವಹಿಸುವ ಉತ್ಸವ ಇದು.

ಕಾರ್ತಿಕ ಮಾಸ ಬಂತೆಂದರೆ ಪಂಡರಾಪುರದ ವಿಠ್ಠಲ ದೇವಸ್ಥಾನಕ್ಕೆ ಸಾವಿರಾರು ಭಜಕರು ಭಾರತದ ಮೂಲೆಮೂಲೆಗಳಿಂದ ಬಂದು ಸೇರಿ ಕುಣಿತ ಭಜನೆ ಮಾಡುವುದು, ವಿಠ್ಠಲ ವಿಠ್ಠಲ ಎಂದು ತಾಳ ಬಡಿಯುತ್ತಾ ಹಾಡುವುದು ತುಂಬಾ ಅದ್ಭುತ. ಆಷಾಢ, ಕಾರ್ತಿಕ ಮಾಸಗಳಲ್ಲಿ ಪಂಡರಾಪುರದ ದೇವಸ್ಥಾನವು ಭೂ ವೈಕುಂಠ ಆಗಿ ಬಿಡುತ್ತದೆ. ಏಕಾದಶಿಯಂದು ಅಹೋರಾತ್ರಿ ಭಜನೆಯು ನಿಲ್ಲುವುದಿಲ್ಲ.

ಅದೇ ರೀತಿ ಕರಾವಳಿಯಲ್ಲಿ ಎಲ್ಲಿ ವೆಂಕಟರಮಣ ದೇವಸ್ಥಾನಗಳು ಇವೆಯೋ ಅಲ್ಲೆಲ್ಲ ಕಾರ್ತಿಕ ಮಾಸದ ಆಚರಣೆ ತುಂಬಾ ಮಹತ್ವದ್ದು. ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಕೆರೆ ದೀಪೋತ್ಸವ, ಮೃಗಬೇಟೆ ಉತ್ಸವ, ಮುಂಜಾನೆಯ ಪಕ್ಷಿ ಜಾಗರಣ ಪೂಜೆ ಎಲ್ಲವೂ ವಿಶೇಷವೇ! ಏಕಾದಶಿಯಂದು ಎಲ್ಲೆಲ್ಲೂ ಭಜನೆ ಮತ್ತು ಭಜನೆಯೇ ಕಿವಿತುಂಬುತ್ತದೆ.
ಕಾರ್ತಿಕ ಮಾಸದ ಮುಖ್ಯವಾದ ಉತ್ಸವ ಲಕ್ಷ ದೀಪೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವುದು ಈ ‘ವಿಶ್ವರೂಪ’ ಹಲವು ದೇವಸ್ಥಾನಗಳಲ್ಲಿ ಈ ಉತ್ಸವ ನಡೆದರೂ ಕಾರ್ಕಳದಲ್ಲಿ ಇದು ಭಾರೀ ವಿಶೇಷ.

ಬೆಳಿಗ್ಗೆ ಮೂರು ಘಂಟೆಗೆ ಮೊದಲೇ ವೆಂಕಟರಮಣ ದೇವಳದ ಮುಂದೆ ಸಾವಿರಾರು ಭಕ್ತರು ಬಂದು ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ. ಇಡೀ ದೇವಾಲಯವು ಪರಿಮಳದ ಹೂವುಗಳಿಂದ, ನೂರಾರು ರಂಗೋಲಿಗಳಿಂದ, ಸಾವಿರಾರು ಹಣತೆಗಳಿಂದ ಅಲಂಕಾರ ಆಗಿರುತ್ತದೆ. ಶ್ರೀ ಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರದಲ್ಲಿ ತೋರಿಸಿದ ವಿಶ್ವರೂಪದ ಹಿನ್ನೆಲೆಯಲ್ಲಿ ಇಡೀ ದೇವಳದಲ್ಲಿ ಹಣತೆ ಮತ್ತು ದೀಪಗಳ ಬೆಳಕು. ಕಿವಿ ತುಂಬುವ ಭಜನೆಗಳು ಇರುತ್ತವೆ.

ಒಂದೇ ಒಂದು ವಿದ್ಯುದ್ದೀಪವೂ ಇಲ್ಲದೇ ಎಲ್ಲವೂ ನೈಸರ್ಗಿಕ ಮಣ್ಣಿನ ಹಣತೆಗಳ ಬೆಳಕಿನಲ್ಲಿ ವೆಂಕಟರಮಣ ದೇವಳವು ಮಿಂದೇಳುತ್ತದೆ. ಒಂದಿಷ್ಟೂ ಕೃತಕ ಬೆಳಕಿಲ್ಲದೇ ಸಹಜವಾದ ಬೆಳಕಿನಲ್ಲಿ ದೇವಾಲಯವನ್ನು, ದೇವರನ್ನು ನೋಡುವುದೇ ಒಂದು ಭಾಗ್ಯ. ಈ ಪರಿಯ ಸೊಬಗಾವ ದೇವರಲ್ಲಿ ನಾ ಕಾಣೆ ಎಂದು ಪುರಂದರದಾಸರ ಭಜನೆಯ ಸಾಲುಗಳು ಅಲ್ಲಿ ಸಾದೃಶ್ಯ ಆಗುತ್ತವೆ.

ಸೂರ್ಯೋದಯದ ಮೊದಲು ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ಇಲ್ಲಿಯೇ ತಯಾರಾದ ತುಪ್ಪದ ತಿರುಪತಿಯ ಲಾಡು ಮತ್ತು ಫಲವಸ್ತುಗಳು ದೊರೆಯುತ್ತವೆ. ಬೆಳಿಗ್ಗೆ ನಸುಕಾದರೂ ಸರತಿಯ ಸಾಲು ಕರಗುವುದೇ ಇಲ್ಲ. ಭಕ್ತಿ ಭಾವದ ಪರಾಕಾಷ್ಠೆಯ ವಿಶ್ವರೂಪ ದರ್ಶನ ಭಜಕರಿಗೆ ಇಡೀ ವರ್ಷ ಮರೆತು ಹೋಗುವುದೇ ಇಲ್ಲ.