ಬಿಜೆಪಿ ಕಚೇರಿಯಲ್ಲಿ ಹೋಮ-ಹವನ
ಬೆಂಗಳೂರು : ಬಿಜೆಪಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ ಅಧಿಕಾರ ಗ್ರಮಣ ಇಂದು ನಡೆಯಲಿದೆ. ಇದಕ್ಕಾಗಿ ಪಕ್ಷದ ಬೆಂಗಳೂರು ಕಚೇರಿ ಜಗನ್ನಾಥ ಭವನದಲ್ಲಿ ಭಾರಿ ಸಿದ್ಧತೆ ಆಗಿದೆ. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶದ ಸೋಲಿನ ನಂತರ ಕಾರ್ಮೋಡ ಕವಿದಿದ್ದ ಕರ್ನಾಟಕ ಬಿಜೆಪಿ ಪಾಳೆಯದಲ್ಲಿ ಮತ್ತೆ ಉತ್ಸಾಹ, ಸಂಭ್ರಮ ಚಿಗುರೊಡೆದಿದೆ. ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದ ನಂತರ ಮಂಕು ಬಡಿದಿದ್ದ ಕಮಲ ಪಾಳಯದಲ್ಲಿ ಮಿಂಚಿನ ಸಂಚಾರವಾದಂತಾಗಿದೆ.
ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ. ಅದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೇಂದ್ರರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ. ಬಳಿಕ ಗೋಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ ಪೂರ್ಣಾಹುತಿಯಲ್ಲಿ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಭಾಗಿಯಾಗಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನ ನೆರವೇರುತ್ತಿದೆ.
ಬಿಜೆಪಿ ಕಚೇರಿಯಿರುವ ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್‌ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇಂದು ಪದಗ್ರಹಣಕ್ಕೆ ಮುನ್ನ ವಿಜಯೇಂದ್ರ ಅವರು ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಬಿ ಎಸ್ ಯಡಿಯೂರಪ್ಪ ನಿವಾಸ ಧವಳಗಿರಿಗೆ ತೆರಳಿ ತಂದೆಯ ಆಶೀರ್ವಾದ ಪಡೆದರು. ಪಕ್ಷದ ಕರ್ನಾಟಕದ ಹಿರಿಯ ನಾಯಕರು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.































